ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ (ರಿ), ಕಲಬುರಗಿ
ಕಲ್ಯಾಣ ಕರ್ನಾಟಕ ಪ್ರದೇಶ
(ತಿದ್ದುಪಡಿ ಬೈಲಾ ದಿನಾಂಕ: 30.11.2020)

1. ಸಂಘದ ಹೆಸರು

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ (ರಿ)

2. ನೋಂದಣಿಯಾದ ಸಂಘದ ಕಛೇರಿ ವಿಳಾಸ

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ, ಕಲಬುರಗಿ ವಿಭಾಗ, ಕಲಬುರಗಿ ಲೋಕೋಪಯೋಗಿ ಕಟ್ಟಡ, ಐವಾನ ಏ ಶಾಹಿ ರಸ್ತೆ, ಕಲಬುರಗಿ - 585102, ಕರ್ನಾಟಕ ರಾಜ್ಯ.

ವ್ಯಾಖ್ಯಾನಗಳು:-
 • “ಸಂಘ‘’ ಅಂದರೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ.
 • “ಜನರಲ್ ಬಾಡಿ” ಅಂದರೆ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು.
 • “ಆಡಳಿತ ಮಂಡಳಿ” ಅಂದರೆ ಆಡಳಿತ ಸಂಘದ ಆಡಳಿತ ಮಂಡಳಿ.
 • “ಬೈಲಾ ಎಂದರೆ”, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಬೈಲಾ.
 • “ಅಧ್ಯಕ್ಷರು” ಅಂದರೆ ಸಂಘದ ಅಧ್ಯಕ್ಷರು.
 • “ಕಾರ್ಯದರ್ಶಿ” ಎಂದರೆ, ಸಂಘದ ಕಾರ್ಯದರ್ಶಿ. ಹಿರಿಯ ಕೆ.ಎ.ಎಸ್., ಅಥವಾ ತತ್ಸಮಾನ ಅಥವಾ ಮೇಲ್ದರ್ಜೆಯ ಅಧಿಕಾರಿ.
 • “ಹಣಕಾಸು ವರ್ಷ” ಎಂದರೆ ವರ್ಷದ 1ನೇ ಏಪ್ರಿಲ್ ನಿಂದ ಆರಂಭಗೊಂಡು ಮುಂಬರುವ ವರ್ಷದ 31ನೇ ಮಾರ್ಚ್‍ವರೆಗೆ.
 • “ಮೆಮೋರಂಡಮ್” ಎಂದರೆ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಮೆಮೋರಂಡಮ್. “ನೋಂದಣಾಧಿಕಾರಿ” ಅಂದರೆ ಕರ್ನಾಟಕ ಸಂಘ ಸಂಸ್ಥೆ ಕಾಯ್ದೆ 1960 ಮತ್ತು ನಿಯಮಗಳು 1961ರಲ್ಲಿ ವ್ಯಾಖ್ಯಾನಿಸಿದಂತೆ.
 • ಸಂಘದ ನಿಯಮಗಳು ಅಂದರೆ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದಿಸಿ ಸರಕಾರದಿಂದ ಅನುಮೋದನೆ ಪಡೆದ ನಿಯಮಗಳು.

3. ಸಂಘ ರಚನೆಯಾದ ದಿನಾಂಕ

ಸಂಘವು ದಿನಾಂಕ: 30.01.2020 ರಂದು ರಚನೆಯಾಗಿರುತ್ತದೆ.

4. ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ನೋಂದಾಣಾಧಿಕಾರಿ

ಸಂಘದ ನೋಂದಾಣಾಧಿಕಾರಿಯ ಕಚೇರಿಯು ಕಲಬುರಗಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ. ಮುಂದುವರೆದು, ಸಂಘದ ಕಾರ್ಯವ್ಯಾಪ್ತಿಯು ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಾದ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳನ್ನು ಒಳಗೊಂಡಿರುತ್ತದೆ.

5. ಸಂಘದ ಕೆಲಸದ ವೇಳೆ

ಸಂಘವು ಪ್ರತಿ ದಿನ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.30 ವರೆಗೆ ಕಾರ್ಯನಿರ್ವಹಿಸುತ್ತದೆ. ಎಲ್ಲಾ ಸರ್ಕಾರಿ ಸಾರ್ವತ್ರಿಕ ರಜೆಗಳು ಅನ್ವಯವಾಗುತ್ತವೆ.

6. ಸಂಘದ ಉದ್ದೇಶ ಮತ್ತು ಚಟುವಟಿಕೆಗಳು

 1. ಕೃಷಿ ಕ್ಷೇತ್ರ :-
  • ಹೈದ್ರಾಬಾದ್-ಕರ್ನಾಟಕದ 50 ಸ್ಥಾನಗಳಲ್ಲಿ ಸಮಗ್ರ ಸಾವಯವ ಕೃಷಿ ಕೇಂದ್ರಗಳು ಹಾಗೂ ಸ್ವಾವಲಂಬಿ ಗ್ರಾಮಗಳಿಗೆ ಇಂಬು ನೀಡುವುದು.
  • ಕನಿಷ್ಠ 5 ಸಾವಿರ ಸಾವಯವ ಕೃಷಿಕರ ಪಡೆ ನಿರ್ಮಾಣ.
  • 1 ಕೋಟಿ ಗಿಡ ನೆಡುವ ವೃಕ್ಷ ಕೋಟಿ ಯೋಜನೆ.
  • 10 ಲಕ್ಷ ಹಣ್ಣು ಕೊಡುವ ಗಿಡಗಳನ್ನು ನೆಡುವುದು, ಕಾಪಾಡುವುದು.
  • ಹೈದ್ರಾಬಾದ್-ಕರ್ನಾಟಕ ಭಾಗದ ಪ್ರತಿ ನಾಗರೀಕ ಒಂದು ವರ್ಷಕ್ಕೆ ಕನಿಷ್ಠ ಒಂದು ಗಿಡ ನೆಟ್ಟು ಕಾಪಾಡುವಂತೆ ಮನವಲಿಸುವುದು.
  • ದೇಶೀಯ ಗೋವುಗಳ ಸಂವರ್ಧನೆ.
  • ದೇಶೀಯ ಗೋತಳಿ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವುದು.
  • ಮೇಕೆ ಸಾಕಾಣಿಕೆ, ಜೇನುಸಾಕಾಣಿಕೆ, ಕೋಳಿಸಾಕಾಣಿಕೆ, ಮಿನುಸಾಕಾಣಿಕೆಗಳಿಗೆ ಪ್ರೊತ್ಸಾಹಿಸುವದು.
  • ಸಮಗ್ರ ಕೃಷಿ ಪದ್ದತಿ ವ್ಯವಸಾಯಕ್ಕೆ ಪ್ರೊತ್ಸಾಹ ನೀಡುವದು.
  • ತಾಲ್ಲೂಕಾ ಮತ್ತು ಜಿಲ್ಲಾ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳ ತಂಡ ರಚಿಸಿ ಸಂಘದ ಯೋಜನೆಗಳ ನಿರಂತರ ಅನುಸರಣೆ ಮತ್ತು ರೈತರಿಗೆ ನಿರಂತರ ಮಾರ್ಗದರ್ಶನ ನೀಡುವುದು.
  • ರೈತರಿಂದ ಕೃಷಿ ಧಾನ್ಯ, ತೊಟಗಾರಿಕ ಬೆಳೆಗಳು, ಸಾವಯವ ಕೃಷಿ ಉತ್ಪನ್ನಗಳು ಹಾಗೂ ಇತರ ಪಶು ಉತ್ಪನ್ನಗಳನ್ನು ಖರೀದಿಸಿ ಮಾರುಕಟ್ಟೆ ಮಾಡುವ ಹಾಗೂ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಉದ್ಯಮೆದಾರರಿಗೆ ಪ್ರೊತ್ಸಾಹ ನೀಡುವದು.
  • ವಿವಿಧ ಕೃಷಿ ಹಾಗೂ ಪಶು ಸಾಕಾಣಿಕೆ ಸಾಧಕರಿಗೆ ಪ್ರಶಸ್ತಿ ನೀಡಿ ಪ್ರೊತ್ಸಾಹಿಸುವದು.
  • ವಿವಿಧ ಕೃಷಿ ಸಂತೆಗಳನ್ನು ಆಯೋಜಿಸುವದು.
  • ಈ ವಿಭಾಗದ ಯೋಜನೆಗಳನ್ನು ಕೃಷಿ ಮತ್ತು ಪಶು ವಿಶ್ವವಿದ್ಯಾಲಯದ ಸಹಯೋಗ ಮತ್ತು ಮಾರ್ಗದರ್ಶದಲ್ಲಿ ಅನುಷ್ಠಾನ ಗೊಳಿಸುವದು.
 2. ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರ:-
  • ಈ ಪ್ರದೇಶಗಳಲ್ಲಿ ಸದ್ವಿಚಾರ, ಆಚರಣೆಗಳ ಅರಿವು, ಅನುಷ್ಠಾನ ಅಂತರ್ಗತ ಕಾರ್ಯಕ್ರಮಗಳು.
  • ಯು.ಪಿ.ಎಸ್.ಸಿ/ಕೆ.ಪಿ.ಎಸ್.ಸಿ./ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದು.
  • ವಿಚಾರ ಸಂಕಿರಣ, ವಿಕಾಸ ಶಿಬಿರ, ಪ್ರೇರಣಾದಾಯಿ ಉಪನ್ಯಾಸಗಳು, ವೈಚಾರಿಕ ಅಧ್ಯಯನ ಶಿಬಿರಗಳು.
  • ಸಮಗ್ರ ವಿಕಾಸದ ಧ್ಯೇಯ ಬಿಂಬಿಸುವ ಗ್ರಂಥಗಳು - ಪುಸ್ತಕಗಳ ಪ್ರಕಟಣೆ.
  • ಮಾದರಿ ಅಂಗನವಾಡಿ ಕಲಿಕಾ ಕೇಂದ್ರಗಳ ಸ್ಥಾಪನೆ.
  • ಡಿಜಿಟಲ ಕ್ಲಾಸ್ ರೂಂ ಗಳನ್ನು ಸ್ಥಾಪಿಸುವದು.
  • ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ದೈಹಿಕ ಮತ್ತು ಮಾನಸಿಕ ಸಮಾಲೋಚನೆಗಾಗಿ ಅಧ್ಯಾಪಕರಿಗೆ ತರಬೇತಿ ನೀಡುವದು.
  • ಶಾಲೆಗಳ ಪರೇಡ ತರಬೇತಿ ಮತ್ತು ಬ್ಯಾಂಡ ಕಿಟ್ ವಿತರಿಸುವದು.
  • ಅಂಧ ಮಕ್ಕಳ ಶಾಲೆಗಳಿಗೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು.
  • ಮಕ್ಕಳ ಅಥ್ಲೆಟಿಕ್ಸÀ ಕ್ರೀಡಾ ಕೂಡಗಳ ಆಯೋಜನೆ.
  • ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳ ತಂಡ ರಚಿಸಿ ನಿರಂತರ ಅನುಸರಣೆ ಮತ್ತು ಮಾರ್ಗದರ್ಶನ ನೀಡುವದು.
 3. ಸ್ವಯಂ ಉದ್ಯೋಗ ಕ್ಷೇತ್ರ:-
  • ಹೊಲಿಗೆ ಮತ್ತು ಕಸೂತಿ ಇತ್ಯಾದಿ ತರಬೇತಿ ಕೇಂದ್ರ ಸ್ಥಾಪನೆ.
  • ಗ್ರಾಮ ವಿಕಾಸದ ಸಾಕಾರಕ್ಕಾಗಿ ಗ್ರಾಮೀಣ ಉದ್ಯೋಗ ಸೃಷ್ಟಿ ಹಾಗೂ ಇದಕ್ಕಾಗಿ ಪ್ರತಿ ಗ್ರಾಮದಲ್ಲಿ ತಜ್ಞ ಜನ ಸಂಪರ್ಕ ಪ್ರಮುಖರ ನೇಮಕಾತಿ.
  • ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ, ಮಾರ್ಗದರ್ಶನ, ಪ್ರೋತ್ಸಾಹ.
  • ಜನೋಪಯೋಗಿ ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರಗಳ ಆಯೋಜನೆ.
  • ವಿವಿಧ ಕಿರು ಉದ್ಯಮೆ, ಗೃಹ ಉಪಯೋಗಿ ಉತ್ಪನ್ನ ತಯಾರಿಕೆ ಘಟಕಗಳ ಸ್ಥಾಪನೆಗೆ ಪೊತ್ಸಾಹ.
  • ಕುಷ್ಟರೋಗದ ಬಾದಿತರಿಗೆ ವಿವಿಧ ಸ್ವಯಂ ಉದೋಗ ತರಬೇತಿ ಮತ್ತು ಘಟಕ ಸ್ಥಾಪನೆಗೆ ನೆರವು ನೀಡುವದು.
  • ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳ ತಂಡ ರಚಿಸಿ ನಿರಂತರ ಅನುಸರಣೆ ಮತ್ತು ಮಾರ್ಗದರ್ಶನ ನೀಡುವುದು.
  • ಸಂಘ ಚಟುವಟಿಕೆಗಳ ಬಗ್ಗೆ, ಸರಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಜನಸ್ಪಂದನಾ ವಿಭಾಗ ಸ್ಥಾಪಿಸಿ ನಿರ್ವಹಿಸುವದು.
  • ಸಂಘದ ಎಲ್ಲಾ ಮಾಹಿತಿ ಸಾರ್ವಜನಿಕರಿಗೆ ಒದಗಿಸಲು ಸಂಘದ ಯೋಜನೆಗಳು, ಜಾರಿಗೊಳಿಸುವ ವಿಧಾನ, ಅರ್ಜಿಸಲ್ಲಿಕೆ ವಿಧಾನ, ಆಯ್ಕೆ ವಿಧಾನ, ಅನುಸರಿಸುವ ವಿಧಾನ, ಫಲಾನುಭವಿಗಳನ್ನು ಮಾರುಕಟ್ಟೆ ಉದ್ಯಮೆದಾರರೊಂದಿಗೆ ಒಪ್ಪಂದ ಮಾಡುವ ವಿಧಾನ, ಫಲಾನುಭವಿಗಳ ಯಶೋಗಾಥೆ ಇತ್ಯಾದಿ ಮಾಹಿತಿ ನೀಡಲು ಸಾಮಾಜಿಕ ಜಾಲತಾಣ, ವೈಬಸೈಟ ಮತ್ತು ಅವಶ್ಯಕತೆಗೆ ಅನುಗುಣವಾಗಿ ಮೋಬೈಲ ಆ್ಯಪ ತಯಾರಿಸಿ ನಿರ್ವಹಣಾ ತಂಡ ರಚಿಸಿ ನಿರಂತರ ಅನುಸರಣೆ ಮಾಡುವದು.
 4. ಆರೋಗ್ಯ ಕ್ಷೇತ್ರ:-
  • “Prevention is Better than Cure” ಎಂಬ ವಿಚಾರ ಅನುಷ್ಠಾನವಾಗುವಂತೆ ತರಬೇತಿ ಶಿಬಿರಗಳು.
  • ಯೋಗ ಶಿಬಿರಗಳನ್ನು ಆಯೋಜಿಸುವುದು.
  • ಮನೆ ಮದ್ದು ಕಾರ್ಯಾಗಾರಗಳು.
  • ಪರಸ್ಪರ ಸಂಬಂಧಗಳ ನಿರ್ವಹಣೆ ತರಬೇತಿ.
  • ಆಯುರ್ವೇದ ಹಾಗೂ ನಾಟಿವೈದ್ಯದ ಸಮಾವೇಶ ಆಯೋಜಿಸುವದು.
  • ಪ್ರಾಥಮಿಕ ಚಿಕಿತ್ಸೆ ಅರಿವು ಕಾರ್ಯಾಗಾರಗಳ ಆಯೋಜನೆ.
  • ಔಷದಿ ಸಸ್ಯಗಳ ಮಾಹಿತಿ ಹಾಗೂ ಬೆಳೆಯಲು ಪ್ರೊತ್ಸಾಹ.
  • ನಿತ್ಯ ಜೀನದಲ್ಲಿ ಸಾಂಪ್ರದಾಯಿಕ ವೈದ್ಯ ಪದ್ಧತಿ ಅಳವಡಿಕೆ ಕಾರ್ಯಾಗಾರ.
  • ಆಲೋಪತಿ ಪ್ರಾಥಮಿಕ ಚಿಕಿತ್ಸೆ, ವಿವಿಧ ಪರಿಕ್ಷೆಗಳ ಮಾಹಿತಿ ಕಾರ್ಯಾಗಾರ.
 5. ಯುವಜನ ಸಬಲೀಕರಣ:-
  • ಯುವ ಜಾಗೃತಿ ಕಾರ್ಯಕ್ರಮಗಳು.
  • ವ್ಯಕ್ತಿತ್ವ ವಿಕಾಸ ಶಿಬಿರಗಳು.
  • ವಿದೇಶಗಳಲ್ಲಿ ಸಫಲ ಸಾರ್ಥಕ ಉದ್ಯೋಗ ನಡೆಸುತ್ತಿರುವ ಬಂಧುಗಳಿಂದ ಮಾರ್ಗದರ್ಶನ ಶಿಬಿರಗಳು, ಸಂಪರ್ಕ ಸಾಧಿಸುವುದು.
  • ಸ್ಪೂರ್ತಿದಾಯಕ ವಿಚಾರ ಸಂಕಿರಣಗಳು.
  • ನಮ್ಮ ಜಿಲ್ಲೆ ನಮ್ಮ ಉತ್ಪನ ಸ್ವಯಂ ಉದ್ಯೋಗ ಅರಿವು ಕಾರ್ಯಾಗಾರ.
  • ಸರಕಾರಿ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ.
  • ಪ್ರತಿ ಗ್ರಾಮದಲ್ಲಿ 01 ಪ್ರಗತಿ ಕೇಂದ್ರ ಸ್ಥಾಪನೆ.
  • ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳ ತಂಡ ರಚಿಸಿ ನಿರಂತರ ಅನುಸರಣೆ ಮತ್ತು ಮಾರ್ಗದರ್ಶನ ನೀಡುವದು.
  • ಭೌತ, ರಸಾಯನ, ಖಗೋಳ ವಿಜ್ಞಾನ, ಎಲೆಕ್ಟ್ರಾನಿಕ್ಸ್, ಕೃತಕ ಬುದ್ದಿಮತ್ತ, ರಿವರ್ಸ್ ಇಂಜನಿಯರಿಂಗ್ ತರಬೇತಿ ಕಾರ್ಯಾಗಾರ ಆಯೋಜಿಸುವದು.
 6. ಮಹಿಳಾ ಸಬಲೀಕರಣ:-
  • ಮಹಿಳಾ ಜಾಗೃತಿ ಶಿಬಿರಗಳು, ಉದ್ಯೋಗಾವಕಾಶಗಳ ಮಾಹಿತಿ.
  • ಸಂಸ್ಕೃತಿ ಶಿಬಿರಗಳು, ಮಾತೃ ಮಿಲನ.
  • ಶೈಕ್ಷಣಿಕ, ತೀರ್ಥಕ್ಷೇತ್ರ ಪ್ರವಾಸಗಳು.
  • ಆರೋಗ್ಯ ಶಿಬಿರಗಳು, ಕೈತೋಟ ವಿವರಗಳು, ಸ್ವದೇಶಿ ವಸ್ತುಗಳ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆಗಳು.
  • ಮಹಿಳೆಯರಿಗೆ ವಿವಿಧ ಕೌಶಲ್ಯಾಭಿವೃದ್ಧಿ ಯೋಜನೆಗಳ ತರಬೇತಿ ಮತ್ತು ಘಟಕಗಳ ಸ್ಥಾಪನೆಗಳ ಪ್ರೊತ್ಸಾಹ.
  • ವಿಶೇಷವಾಗಿ ಸ್ತ್ರೀ ಶಕ್ತಿ ಸಂಘಟನೆ ಹಾಗೂ ಮಹಿಳಾ ಸಂಘಟನೆಗಳಿಗೆ ಉತ್ಪನ್ನಗಳ ಸಂಗ್ರಹ ಮತ್ತು ಮಾರುಕಟ್ಟೆ ಸರಬರಾಜು ಉದ್ಯಮೆ ಸ್ಥಾಪನೆ ನೆರವು ನೀಡುವದು.
  • ಗೃಹಣಿಯರಿಗೆ ಮನೆ ಅಂಗಳದಲ್ಲಿ ವಿವಿಧ ಔಷಧಿ ಸಸ್ಯ ಬೆಳೆಯುವ ತರಬೇತಿ.
  • ಮಹಿಳೆಯರಿಗೆ ಮನೆಯಂಗಳ ಮತ್ತು ಛಾವಣಿ ಮೇಲೆ ಸಾವಯುವ ತರಕಾರಿ ಬೆಳೆಯುವ ತರಬೇತಿ ಮತ್ತು ತರಬೇತಿ ಪಡೆದವರನ್ನು ಮಾರುಕಟ್ಟೆ ಉದ್ಯಮೆಯೊಂದಿಗೆ ಸಂಪರ್ಕ ಕಲ್ಪಿಸುವದು.
  • ಆಪ್ತ ಸಮಾಲೋಚನೆ ಕಾರ್ಯಾಗಾರಗಳು.
 7. ಮೌಲ್ಯಾರಾಧನೆ:-
  • ಕಾಯಕ ಸಂಸ್ಕೃತಿ ಬೆಳೆಸಲು ಚಟುವಟಿಕೆ ಮತ್ತು ಜಾನಪದ ವೈಭವದ ತಿಳುವಳಿಕೆ.
  • ಕಲೆ, ಸಾಹಿತ್ಯ, ಸ್ವಚ್ಛ ಗ್ರಾಮ, ಬಯಲು ಮುಕ್ತ ಶೌಚಾಲಯ ಅಭಿಯಾನ, ಜ್ಞಾನ-ವಿಜ್ಞಾನ ಚಟುವಟಿಕೆಗಳು, ಕ್ರೀಡಾಕೂಟಗಳು, ಹೈದ್ರಾಬಾದ್-ಕರ್ನಾಟಕದ ಹಿರಿಮೆ-ಗರಿಮೆ ತಿಳಿಸುವ ಧ್ವನಿ ಬೆಳಕು ಕಾರ್ಯಕ್ರಮ, ನಿರಂತರ ನಡೆಸಿಕೊಂಡು ಹೋಗುವುದು.
  • ಕಲ್ಯಾಣ ಕರ್ನಾಟಕದ ವಿಭಾಗದ ಶರಣರ, ದಾಸರ, ಜೈನರ ಮತ್ತು ಇತಿಹಾಸÀದ ಪ್ರಮುಖ ಘಟ್ಟಗಳ ಬಗ್ಗೆ ಮಾಹಿತಿ ಶಿಬಿರ, ವಿಚಾರ ಸಂಕೀರ್ಣ ಹಾಗೂ ಸ್ಪರ್ಧೆ ಆಯೋಜಿಸಿ ಸಮಸ್ತ ಜನತೆಯಲ್ಲಿ ಹಿಂದುಳಿದ ಭಾಗದವರು ಎಂಬ ಮನೋಭಾವನೆ ಹೊಗಲಾಡಿಸಲು ಕ್ರಮ ವಹಿಸುವದು.
  • ಕಲ್ಯಾಣ ಕರ್ನಾಟಕ ವಿಭಾಗದ ವಿವಿಧ ಪ್ರವಾಸಿ ತಾಣಗಳ ಮಾಹಿತಿ ಶಿಬಿರ ಮತ್ತು ಅಭಿವೃದ್ಧಿ ಕಾರ್ಯ ಜರುಗಿಸಿ ಈ ಭಾಗದ ಮಹತ್ವವನ್ನು ಮನದಟ್ಟು ಮಾಡಿಕೊಡುವದು ಜೊತೆಗೆ ಪ್ರವಾಸಕ್ಕೆ ಪೂರಕ ಉದ್ಯಮೆಗಳ ಬೆಳವಣಿಗೆಗೆ ಪ್ರೊತ್ಸಾಹ ನೀಡುವದು.
  • ಜಾನಪದ ಕಲೆ ಸಂಸ್ಕøತಿ ಉಳಿಸಿ ಬೆಳೆಸುವ ಯೋಜನೆಗಳಿಗೆ ಪ್ರೊತ್ಸಾಹಿಸುವದು.
  • ಕಲ್ಯಾಣ ಕರ್ನಾಟಕ ವಿಭಾಗದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಕೇಂದ್ರ ಕಛೇರಿಯಲ್ಲಿ Kalyan Karnataka Knowledge Centre, Kalyan Karnataka call Centre, Kalyan Karnataka Media Centre ವಿಭಾಗಗಳನ್ನು ಆರಂಭಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು.
 8. ನಾಗರೀಕ ಮೂಲ ಸೌಕರ್ಯ:-
  • ಬೈಲಾದಲ್ಲಿರುವ ಉದ್ದೇಶಗಳು ಮತ್ತು ಚಟುವಟಿಕೆಗಳು ಈಡೇರಿಸಲು ಅವಶ್ಯಕ ನಾಗರೀಕ ಮೂಲಸೌಕರ್ಯಗಳನ್ನು ತೆಗೆದುಕೊಳ್ಳುವುದು.
 9. ಗ್ರಾಮಗಳ ಸಬಲೀಕರಣ:-
  • ಸಂಘದ ಅಧ್ಯಕ್ಷರ ನಿರ್ದೇಶನ ಹಾಗೂ ಮಾರ್ಗದರ್ಶನದ ಮೇರೆಗೆ ಆಡಳಿತ ಮಂಡಳಿಯ ಸದಸ್ಯರುಗಳೊಂದಿಗೆ ಸಮಾಲೋಚಿಸಿ, ಗ್ರಾಮದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತೆಗೆದುಕೊಳ್ಳುವುದು.
  • ಸ್ವಾವಲಂಬಿ ಗ್ರಾಮ ನಿರ್ಮಾಣ ಪ್ರಶಿಕ್ಷಣ ತರಬೇತಿ.
  • ಪ್ರತಿ ಗ್ರಾಮದಲ್ಲಿ ಪ್ರಗತಿ ಕೇಂದ್ರಗಳ ಸ್ಥಾಪನೆ.
  • ಪ್ರತಿ ಗ್ರಾಮ ಪಂಚಾಯತಿಯಲ್ಲಿ ವಿವಿಧ ತರಬೇತಿ ನೀಡುವ ಕೇಂದ್ರಗಳ ಸ್ಥಾಪನೆ.

7. ಸಂಘದ ಬೈಲಾಗಳು

ಸಂಘದ ಬೈಲಾ ಪ್ರತಿಗಳನ್ನು ಮೆಮೋರಂಡೋಮ್ ಜೊತೆ ಕಡತದಲ್ಲಿರುಸುವುದು.

8 (A). ಅಧ್ಯಕ್ಷರು

 • ನೇಮಕ: ಅಧ್ಯಕ್ಷರನ್ನು ಕರ್ನಾಟಕ ಸರ್ಕಾರದಿಂದ ನೇಮಕಮಾಡಲಾಗುವುದು.
 • ಅರ್ಹತೆ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಣನೀಯವಾದ ಸೇವೆಯನ್ನು ಸಲ್ಲಿಸಿದªರಾಗಿರಬೇಕು.
 • ಸೇವಾವಧಿ: ಅಧ್ಯಕ್ಷರ ಸೇವಾವಧಿಯು ನೇಮಕಗೊಂಡ ದಿನಾಂಕದಿಂದ ಮೂರು ವರ್ಷಗಳಾಗಿರುತ್ತವೆ.
 • ಮರುನೇಮಕ: ಅಧ್ಯಕ್ಷರು ಮುಂದಿನ ಅವಧಿಗೆ ಮರು ನೇಮಕಕ್ಕೆ ಅರ್ಹರಿರುತ್ತಾರೆ.
 • ಸಂಭಾವನೆ: ಸಂಭಾವನೆಯು ಆಡಳಿತ ಮಂಡಳಿಯ ಸಭೆಯ ನಿರ್ಣಯದಂತೆ ಇರುತ್ತದೆ. ಮುಂದುವರೆದು, ಅಧ್ಯಕ್ಷರಿಗೆ ಒಂದು ವಾಹನ, ಕಚೇರಿಗೆ ಮತ್ತು ನಿವಾಸಕ್ಕೆ ದೂರವಾಣಿ ಸೌಲಭ್ಯ ಹಾಗೂ ಇತರೆ ಅರ್ಹ ಸೌಲಭ್ಯಗಳು.
 • ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಅಧ್ಯಕ್ಷರು ಸೂಚಿಸುವ ಆಡಳಿತ ಮಂಡಳಿಯ ಯಾವುದಾದರೂ ಒಬ್ಬ ಸದಸ್ಯರನ್ನು ನೇಮಿಸಿ ಸಭೆ ನಡೆಸಲು ಸೂಚಿಸುವುದು.

(B). ಆಡಳಿತ ಮಂಡಳಿಯ ಸದಸ್ಯರು

ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಅಧ್ಯಕ್ಷರಿಂದ ನೇಮಿಸಲ್ಪಡುತ್ತಾರೆ. ಆಡಳಿತ ಮಂಡಳಿಯ ಸಭೆಯಲ್ಲಿ ಕನಿಷ್ಟ 7 ಸದಸ್ಯರು ಗರಿಷ್ಟ 15 ಸದಸ್ಯರಿರುತ್ತಾರೆ.
 • ನೇಮಕ: ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಅಧ್ಯಕ್ಷರಿಂದ ನೇಮಿಸಲ್ಪಡುತ್ತಾರೆ.
 • ಅರ್ಹತೆ: ಮಂಡಳಿಯ ಎಲ್ಲಾ ಸದಸ್ಯರನ್ನು ಸಂಘದ ಉದ್ದೇಶ ಮತ್ತು ಚಟುವಟಿಕೆಗಳನ್ನು ಈಡೇರಿಸಲು ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಲು ಅಧ್ಯಕ್ಷರಿಗೆ ಅಧಿಕಾರವಿರುತ್ತದೆ.
 • ಸೇವಾವಧಿ: ಮಂಡಳಿಯ ಎಲ್ಲಾ ಸದಸ್ಯರ ಸೇವಾವಧಿಯು ನೇಮಕಗೊಂಡ ದಿನಾಂಕದಿಂದ ಮೂರು ವರ್ಷಗಳಾಗಿರುತ್ತವೆ.
 • ಮರುನೇಮಕ: ಅಧ್ಯಕ್ಷರ ವಿವೇಚನಾಧಿಕಾರದ ಮೇಲೆ ಮುಂದಿನ ಅವಧಿಗೆ ಮರು ನೇಮಕಕ್ಕೆ ಅರ್ಹರಿರುತ್ತಾರೆ.
 • ಸಂಭಾವನೆ: ಸಂಭಾವನೆಯು ಆಡಳಿತ ಮಂಡಳಿಯ ಸಭೆಯ ನಿರ್ಣಯದಂತೆ ಇರುತ್ತದೆ.
 • ಆಡಳಿತ ಮಂಡಳಿಯ ಯಾವುದಾದರು ಸದಸ್ಯರ ಅನುಪಸ್ಥಿತಿಯಲ್ಲಿ ಸಂಘದ ಅಧ್ಯಕ್ಷರು ಪರ್ಯಾಯ ಸದಸ್ಯರನ್ನು ನೇಮಕ ಮಾಡಲು ಅಧಿಕಾರ ಹೊಂದಿರುತ್ತಾರೆ.
 • ಆಡಳಿತ ಮಂಡಳಿಯ ವಿವೇಚನೆ ಮೇಲೆ ಅಧ್ಯಕ್ಷರು ಯಾವುದಾದರು ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಬಹುದು ಹಾಗೂ ಮರು ಸ್ಥಾಪಿಸಬಹುದು.

(C). ಕಾರ್ಯದರ್ಶಿ

 • ನೇಮಕ ಮತ್ತು ಅರ್ಹತೆ: ಕಾರ್ಯದರ್ಶಿಯು ಕೆ.ಎ.ಎಸ್. ಹಿರಿಯ ಶ್ರೇಣಿಯ ಅಧಿಕಾರಿ ಅಥವಾ ತತ್ಸಮಾನ ಅಥವಾ ಮೇಲ್ರ್ದಜೆಯ ಅಧಿಕಾರಿಯನ್ನು ಕರ್ನಾಟಕ ಸರ್ಕಾರದಿಂದ ನೇಮಕ ಮಾಡುವುದು.
 • ಸೇವಾವಧಿ: ಕರ್ನಾಟಕ ಸರ್ಕಾರದ ನಿಯಮದಂತೆ.
 • ಮರುನೇಮಕಾತಿ: ಕರ್ನಾಟಕ ಸರ್ಕಾರದ ಆದೇಶಾನುಸಾರ.
 • ಸಂಭಾವನೆ ಮತ್ತು ಭತ್ಯೆಗಳು: ಕೆ.ಸಿ.ಎಸ್.ಆರ್., ನಿಯಮದಂತೆ, ಒಂದು ವಾಹನ ಕಚೇರಿ ಮತ್ತು ನಿವಾಸಕ್ಕೆ ದೂರವಾಣಿ ಸೌಲಭ್ಯ ಹಾಗೂ ಆಡಳಿತ ಮಂಡಳಿಯ ಸಭೆಯ ನಿರ್ಣಯದಂತೆ ಇತರೆ ಸೌಲಭ್ಯಗಳು.
 • ಕಾರ್ಯದರ್ಶಿಯ ಅನುಪಸ್ಥಿತಿಯಲ್ಲಿ ತಾತ್ಕಾಲಿಕವಾಗಿ ಬೇರೊಬ್ಬ ಅಧಿಕಾರಿಯನ್ನು ಸರ್ಕಾರದಿಂದ ನೇಮಿಸುವುದು.

(D). ವಿಶೇಷ ಆಹ್ವಾನಿತರು

 • ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ವಿಭಾಗದ ಆರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಾಣಾಧಿಕಾರಿಗಳು, ಹಾಗೂ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು.
 • ಆಯಾ ಜಿಲ್ಲೆಯಲ್ಲಿರುವ ವಿಶ್ವವಿದ್ಯಾಲಯಗಳ ಉಪ-ಕುಲಪತಿಗಳು ಹಾಗೂ ಸಹಕಾರ ಸಂಘಗಳ ನೋಂದಣಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಪ್ರವಾಸೊದ್ಯಮ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಪಶುಸಂಗೋಪನೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ, ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ಇತ್ಯಾದಿಗಳ ವಿಭಾಗ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು.

9. ಆಡಳಿತ ಮಂಡಳಿ

ಸಂಘದ ಕಾರ್ಯಚಟುವಟಿಕೆಗಳನ್ನು ನಡೆಸಲು ಆಡಳಿತ ಮಂಡಳಿಯನ್ನು ಕೆಳಕಾಣಿಸಿದಂತೆ ರಚಿಸಲಾಗುವದು.
 • ಅಧ್ಯಕ್ಷರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ಗಣನೀಯವಾದ ಸೇವೆಯನ್ನು ಸಲ್ಲಿಸಿದವರನ್ನು ಸರಕಾರದಿಂದ ನೇಮಕ ಮಾಡಲಾಗುವದು.
 • ಆಡಳಿತ ಮಂಡಳಿ ಸದಸ್ಯರು: ಕಲ್ಯಾಣ ಕರ್ನಾಟಕ ವಿಭಾಗ ವ್ಯಾಪ್ತಿಯ 06 ಜಿಲ್ಲೆಗಳಿಂದ ಕನಿಷ್ಠ 7 ರಿಂದ ಗರಿಷ್ಠ 15 ಜನರನ್ನು ಸಂಘದ ಆಡಳಿತ ಮಂಡಳಿ ಸದಸ್ಯರನ್ನಾಗಿ ಸಂಘದ ಅಧ್ಯಕ್ಷರು ನೇಮಕ ಮಾಡುತ್ತಾರೆ.

10 (A). ಆಡಳಿತ ಮಂಡಳಿಯ ಅಧಿಕಾರಗಳು

ಆಡಳಿತ ಮಂಡಳಿಯು ಈ ಕೆಳಕಂಡ ಅಧಿಕಾರಗಳನ್ನು ಹೊಂದಿರುತ್ತದೆ.
 • ಸಂಘದ ಆಯವ್ಯಯ ಪ್ರಸ್ತಾವನೆಗಳನ್ನು ಅಂಗೀಕರಿಸುವುದು.
 • ಹೊಸ ಹುದ್ದೆಗಳನ್ನು ಸೃಜಿಸುವಾಗ ಸರ್ಕಾರದ ಪೂರ್ವಾನುಮತಿಯೊಂದಿಗೆ ನಿಗಧಿಪಡಿಸಿದ ಅನುದಾನದಲ್ಲಿ ಸದರಿ ಪ್ರಸ್ತಾವನೆಗಳನ್ನು ಅಂಗೀಕರಿಸುವುದು.
 • ಸಂಘದ ಬೈಲಾದಲ್ಲಿ ವಿವರಿಸಿದಂತೆ, ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಅನುಮೋದಿಸಿದಂತೆ, ಸಂಘದ ಕಾರ್ಯದರ್ಶಿಯವರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಆರ್ಥಿಕ ಅಧಿಕಾರದ ಮಿತಿಯನ್ನು ರೂ 2.00 ಕೋಟಿವರೆಗೆ ಅಂಗೀಕರಿಸುವುದು ಮತ್ತು ಸದರಿ ಮಾಹಿತಿಯನ್ನು ಸರಕಾರ ಗಮನಕ್ಕೆ ತರುವುದು.
 • ಸಂಘದ ವಾರ್ಷಿಕ ವರದಿಯನ್ನು ಸ್ವೀಕರಿಸುವುದು ಮತ್ತು ಅಂಗೀಕರಿಸುವುದು.
 • ದೇಣಿಗೆ ಸ್ವೀಕೃತಿಗಳನ್ನು ಅನುಮೋದಿಸುವುದು.
 • ಸಂಘದ ವಾರ್ಷಿಕ ಆಯವ್ಯಯ ತಯಾರಿಸುವುದು.
 • ಸಂಘದ ವಾರ್ಷಿಕ ತಖ್ತೆ ಅನುಮೋದಿಸುವುದು.
 • ಭವಿಷ್ಯದಲ್ಲಿ ಸಂಘದ ವಿಸ್ತರಣೆ ಕುರಿತು ಅನುಮೋದನೆ.
 • ಸಂಘದ ನೌಕರರನ್ನು ಕರ್ತವ್ಯ ನಿರ್ಲಕ್ಷತೆಗಾಗಿ ಹಾಗೂ ದುರ್ವತನೆಗಾಗಿ ಶಿಸ್ತು ಕ್ರಮವನ್ನು ಜರುಗಿಸಲು ಕಾರ್ಯದರ್ಶಿಯವರಿಗೆ ಶಿಫಾರಸ್ಸು ಮಾಡುವದು.
 • ಸಂಘದ ವಿವಿಧ ಕ್ರಿಯಾ ಯೋಜನೆಗಳ ಅನುಷ್ಠಾನಕ್ಕಾಗಿ ಅವಶ್ಯಕ ಸಂಖ್ಯೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಅನುಮೊದಿಸುವದು.

(B). ಅಧ್ಯಕ್ಷರ ಅಧಿಕಾರ

 • ಆಡಳಿತ ಮಂಡಳಿಯ ಎಲ್ಲಾ ಸಭೆಗಳ ಅಧ್ಯಕ್ಷತೆ ವಹಿಸುವುದು.
 • ಸಂಘದ ಉದ್ದೇಶ ಮತ್ತು ಎಲ್ಲಾ ಚಟುವಟಿಕೆಗಳನ್ನು ಈಡೇರಿಸಲು ಸಂಘಕ್ಕೆ ನಿರ್ದೇಶನ ನೀಡುವುದು.
 • ಅಧ್ಯಕ್ಷರು ಸಂಘದ ವಿವಿಧ ಯೋಜನೆಗಳಿಗೆ ನಿಗದಿಪಡಿಸಿದಂತೆ ಸರಕಾರದಿಂದ ಬಿಡುಗಡೆಯಾಗುವ ಅನುದಾನದಲ್ಲಿ ಶೇ 5% ಅನುದಾನವನ್ನು ತಮ್ಮ ವಿವೇಚನೆಗೆ ಅನುಗುಣವಾಗಿ ಸರಕಾರದಿಂದ ಅನುಮೋದಿತ ಯಾವುದಾದರೂ ಯೋಜನೆಗಳಲ್ಲಿ ಬಳಸಲು ಅಧಿಕಾರ ಹೊಂದಿರುತಾರೆ.
 • ಸಂಘದ ಆಡಳಿತ ಮಂಡಳಿಗೆ ನಿಯೋಜಿತರಾದ ಸದಸ್ಯರು ತಮಗೆ ವಹಿಸಿದ ಕಾರ್ಯ ನಿರ್ವಹಿಸಲು ವಿಫಲರಾದಲ್ಲಿ ಅಥವಾ ನಿರಾಸಕ್ತಿ ತೊರಿಸಿದಲ್ಲಿ ಅವರನ್ನು ನಿಗದಿತ ಅವಧಿ ಪೂರ್ವದಲ್ಲಿ ಬದಲಾಯಿಸಿ ಬೇರೆ ಅರ್ಹ ವ್ಯಕ್ತಿಯನ್ನು ನೇಮಿಸಲು ಅಧ್ಯಕ್ಷರು ಅಧಿಕಾರ ಹೊಂದಿರುತ್ತಾರೆ.
 • ಸಂಘದ ಯೋಜನೆಗಳ ವಾರ್ಷಿಕ ಕ್ರಿಯಾ ಯೋಜನೆ ರೂಪಿಸಲು ಹಾಗೂ ಅನುಷ್ಠಾನಗೊಳಿಸುವದಕ್ಕಾಗಿ ಮಾರ್ಗದರ್ಶನ ನೀಡಲು ವಿವಿಧ ವಿಷಯಗಳ / ಕ್ಷೇತ್ರಗಳ ತಜ್ಞರನ್ನು ಸಂಘದ ಸಲಹಾಮಂಡಳಿ ಸದಸ್ಯರನ್ನಾಗಿ ನೇಮಿಸಿಕೊಳ್ಳಲು ಅಧ್ಯಕ್ಷರು ಅಧಿಕಾರ ಹೊಂದಿರುತ್ತಾರೆ. ಸಲಹಾ ಮಂಡಳಿ ಸದಸ್ಯರ ಗೌರವ ಧನ, ಪ್ರವಾಸ ಭತ್ಯೆ, ಸಭಾ ಭತ್ಯೆ ಮತ್ತು ಇತರ ಸೌಲಭ್ಯಗಳ ಸಂಘದ ಆಡಳಿತ ಮಂಡಳಿ ನಿರ್ಣಯಸಿದಂತೆ ಪಾವತಿಸಲಾಗುವದು.
 • ಸಂಘದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಡಳಿತ ಮಂಡಳಿ ಸದಸ್ಯರನ್ನು ಮಾತ್ರ ಒಳಗೊಂಡಿರುವಂತೆ ವಿವಿಧ ಉಪಸಮಿತಿಗಳನ್ನು ರಚಿಸುವ ಹಾಗೂ ಹೀಗೆ ರಚಿಸಿದ ಉಪಸಮಿತಿಗಳ ಕಾರ್ಯವ್ಯಾಪ್ತಿ, ಪ್ರವಾಸ ಭತ್ಯೆ ಇನ್ನಿತರ ಸೌಲಭ್ಯಗಳ ಬಗ್ಗೆ ನಿರ್ಧರಿಸುವ ಅಧಿಕಾರವನ್ನು ಅಧ್ಯಕ್ಷರು ಹೊಂದಿರುತ್ತಾರೆ.
 • ಸಂಘದ ಕಾರ್ಯೋದ್ದೇಶಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ, ಸಂದರ್ಭಕ್ಕನುಸಾರವಾಗಿ ಬೈಲಾದಲ್ಲಿ ವಿವರಿಸಿದ ವಿವಿಧ ಕ್ಷೇತ್ರಗಳಿಂದ ಅನುಭವಿ ತಜ್ಞರನ್ನು ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದ ಮೇಲೆ ಅಥವಾ ಗೌರವ ಧನ ಸಂದಾಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬಹುದು.

(C). ಸದಸ್ಯ ಕಾರ್ಯದರ್ಶಿ ಅಧಿಕಾರ

 • ಸಂಘದ ಎಲ್ಲಾ ಸಭೆಗಳನ್ನು ಆಯೋಜಿಸುವುದು.
 • ಸಂಘದ ಎಲ್ಲಾ ಸಭೆಗಳ ನಡವಳಿ ಹಾಗೂ ವರದಿಗಳನ್ನು ತಯಾರಿಸುವುದು.
 • ಸಂಘದ ನಿರ್ದೇಶನದಂತೆ ಬ್ಯಾಂಕ್ ಖಾತೆಯನ್ನು ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ನಿರ್ವಹಿಸುವುದು.
 • ಕಾರ್ಯದರ್ಶಿಯು ಸಂಘದ ಯೋಜನೆಗಳ ಅನುಷ್ಠಾನಕ್ಕಾಗಿ ಸರಕಾರವು ಮಂಜೂರಿಸಿದ ಹುದ್ದೆಗಳಿಗೆ ನೇಮಕ ಹೊಂದುವ ಅಧಿಕಾರಿ/ಸಿಬ್ಬಂದಿಯವರಿಗೆ ಇಲಾಖೆ ಮುಖ್ಯಸ್ಥರಾಗಿ ಹಾಗೂ ಶಿಸ್ತು ಪ್ರಾಧಿಕಾರವಾಗಿ ಸರಕಾರ ನಿಗದಿಪಡಿಸಿದ ಅಧಿಕಾರ ಹೊಂದಿರುತ್ತಾರೆ.
 • ಸಂಘದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಗರಿಷ್ಟ ರೂ.200 ಕೋಟಿ ಮೊತ್ತದ ಯೋಜನೆಗಳಿಗೆ ಅಥವಾ ಸರಕಾರವು ಈ ಕುರಿತು ನಿಗದಿಪಡಿಸಿದ ಮೊತ್ತದ ಮಿತಿಯೊಳಗೆ ಸಂಘದ ಯೋಜನೆಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲು ಅಧಿಕಾರ ಹೊಂದಿರುತ್ತಾರೆ. ಆಡಳಿತಾತ್ಮಕ ಮಂಜೂರಾತಿ ನೀಡುವ ಯೋಜನೆಗಳು ಸರಕಾರದಿಂದ ಅನುಮೊದಿತವಾಗಿದ್ದು ಸರಕಾರದಿಂದ ಬಿಡುಗಡೆಯಾಗಿರುವ ಅನುದಾನದ ಮಿತಿಯೊಳಗೆ ಇರತಕ್ಕದ್ದು.
 • ಸಂಘದ ಯೋಜನೆಗಳ ವೆಚ್ಚವನ್ನು ಏಕಕಾಲದಲ್ಲಿ ರೂ. 25.00 ಲಕ್ಷಗಳಿಗೆ ಮೀರದಂತೆ ಅಥವಾ ಸರಕಾರವು ಅನುಮೋದಿಸಿದ ಮಿತಿಯೊಳಗೆ ಪಾವತಿಸಲು ಅಧಿಕಾರ ಹೊಂದಿರುತ್ತಾರೆ.
 • ಸಂಘದ ಆಡಳಿತ ಮಂಡಳಿ ಸದಸ್ಯರಿಗೆ ಸರಕಾರವು ಅನುಮೋದಿಸಿದ ದರಗಳ ವೇತನ ಮತ್ತು ಇತರ ಭತ್ಯೆಗಳನ್ನು ಪಾವತಿಸಲು ಅಧಿಕಾರ ಹೊಂದಿರುತ್ತಾರೆ.
 • ಕಾರ್ಯದರ್ಶಿಯವರ ಅಧೀನದಲ್ಲಿ ಕೆಲಸ ನಿರ್ವಹಿಸುವ ಅಧಿಕಾರ / ಸಿಬ್ಬಂದಿಯವರಿಗೆ ಸರಕಾರದ ನಿಯಮಗಳನ್ವಯ ಅರ್ಹವಿರುವ ವೇತನ ಮತ್ತು ಇತರ ಎಲ್ಲಾ ಭತ್ಯೆಗಳನ್ನು ಸಂಘದ ಆಡಳಿತಾತ್ಮಕ ವೆಚ್ಚದ ಅನುದಾನದಿಂದ ಪಾವತಿಸಲು ಅಧಿಕಾರ ಹೊಂದಿರುತ್ತಾರೆ.
 • ಸಂಘದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಡಳಿತ ಮಂಡಳಿ ಅನುಮೊದಿಸಿದಂತೆ ಅವಶ್ಯಕವಿರುವಷ್ಟು ಸಂಖ್ಯೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿಯನ್ನು ಅಧಿಕೃತ ಏಜೆನ್ಸಿದಾರರ ಮುಖಾಂತರ ನೇಮಿಸಿಕೊಳ್ಳಲು ಅಧಿಕಾರ ಹೊಂದಿದ್ದು ಸದರಿ ವೆಚ್ಚವು ಯೋಜನೆಗಳ ಅನುದಾನದ ಶೇ 5% ಮಿತಿ ಮೀರದಂತೆ ಕ್ರಮ ವಹಿಸುವದು.
 • ಸಂಘದ ಯೋಜನೆಗಳಲ್ಲಿ ಸಿವಿಲ್ ಸ್ವರೂಪದ ಅಥವಾ ತಾಂತ್ರಿಕ ಸ್ವರೂಪದ ಅಂಶಗಳಿದ್ದಲ್ಲಿ ತಾಂತ್ರಿಕ ಅನುಮೋದನೆಗಾಗಿ ಒಬ್ಬ ಅಧೀಕ್ಷಕ ಅಭಿಯಂತರರ ದರ್ಜೆಗಿಂತ ಕಡಿಮೆಯಿರದ ಅಧಿಕಾರಿಯನ್ನು ತಾಂತ್ರಿಕ ಸಲಹೆಗಾರರಾಗಿ ನೇಮಿಸಿ ಗರಿಷ್ಟ ರೂ.2.00 ಕೋಟಿವರೆಗೆ ತಾಂತ್ರಿಕ ಅನುಮೋದನೆ ನೀಡುವುದು ಮತ್ತು ಎಲ್ಲಾ ಕಾಮಗಾರಿಗಳ ಪರಿವೀಕ್ಷಣೆ ನಡೆಸುವುದು.

11. ಸದಸ್ಯ ಕಾರ್ಯದರ್ಶಿಯ ವಿಶೇಷ ಹಣಕಾಸಿನ ಅಧಿಕಾರಗಳು

 • ಸಂಘದ ಸದಸ್ಯ ಕಾರ್ಯದರ್ಶಿಗೆ ಗರಿಷ್ಟ ರೂ.2.00 ಕೋಟಿವರೆಗೆ ಅಥವಾ ಸರಕಾರವು ನಿಗದಿ ಪಡಿಸಿದ ಮಿತಿಯಲ್ಲಿ ಸಂಘದ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವುದು.
 • ಸರಕಾರವು ಕ್ರೀಯಾ ಯೋಜನೆ ಅನುಮೊದಿಸಿದನ್ವಯ ವಿವಿಧ ಯೋಜನೆಗಳಿಗೆ ನಿಗದಿ ಪಡಿಸಿದ ಅನುದಾನದ ಮಿತಿಯಲ್ಲಿ ಯೋಜನೆಗಳ ವೆಚ್ಚವನ್ನು ಪಾವತಿಸುವದು.

12. ಸದಸ್ಯರ ವಿಳಾಸ ಬದಲಾವಣೆ

ಸಂಘದ ಸದಸ್ಯರ ವಿಳಾಸ ಬದಲಾವಣೆಯಾದರೆ, ಸಂಘದ ಸದಸ್ಯ ಕಾರ್ಯದರ್ಶಿಯ ಗಮನಕ್ಕೆ ತರುವುದು.

13. ಆಡಳಿತ ಮಂಡಳಿಯ ಸದಸ್ಯರ ಅನರ್ಹತೆ

ಆಡಳಿತ ಮಂಡಳಿಗೆ ನೇಮಕಗೊಂಡಿರುವ ಸದಸ್ಯರು ಈ ಕೆಳಕಂಡ ಕಾರಣಗಳಿಗಾಗಿ ಅನರ್ಹರಾಗಿರುತ್ತಾರೆ.
 • ನಿಧನ ಹೊಂದಿದರೆ.
 • ರಾಜೀನಾಮೆ ನೀಡಿದರೆ.
 • ಬುದ್ಧಿಭ್ರಮಣೆ ಅಥವಾ ದಿವಾಳಿ.
 • ಕ್ರಿಮಿನಲ್ ಹಿನ್ನೆಲೆ.

14. ಸದಸ್ಯರ ಹಕ್ಕು, ಬದ್ಧತೆ, ಸೌಲಭ್ಯಗಳು

ಸಂಘದ ಎಲ್ಲಾ ಸದಸ್ಯರ ಹಕ್ಕು, ಬದ್ಧತೆ ಸೌಲಭ್ಯಗಳು ಬೈಲಾದಂತೆ ಇರುತ್ತವೆ.

15. ಮೊಕ್ಕದ್ದಮೆಗಳನ್ನು ಕುರಿತು ವ್ಯವಹರಿಸುವ ಅಧಿಕೃತ ಅಧಿಕಾರಿ ಹೆಸರು

ಸಂಘದ ಸದಸ್ಯ ಕಾರ್ಯದರ್ಶಿಯು ಕರ್ನಾಟಕ ಸಂಘ ಸಂಸ್ಥೆಗಳ ನೋಂದಾಣಿ ಕಾಯ್ದೆ ಸೆಕ್ಷನ್ (2) ರಡಿ ಗೊತ್ತುಪಡಿಸಿದ ಅಧಿಕಾರಿ ಮೊಕ್ಕದ್ದಮೆಗಳನ್ನು ಕುರಿತು ವ್ಯವಹರಿಸುವ ಅಧಿಕೃತ ಅಧಿಕಾರಿಯಾಗಿರುತ್ತಾರೆ.

16. ನಿರ್ದೇಶನ ನೀಡಲು ಅಧಿಕಾರ ಹೊಂದಿರುವ ಅಧಿಕಾರಿ

 • ಸಂಘದ ಬೈಲಾ ಮತ್ತು ನಿಯಮಗಳಂತೆ ಆಡಳಿತ ಮಂಡಳಿಯ ನಿರ್ದೇಶನದಂತೆ ಕಾರ್ಯದರ್ಶಿಯು ಸಂಘದ ಕೆಲಸ ಕಾರ್ಯಗಳನ್ನು ನಡೆಸಲು ನಿರ್ದೇಶನ ನೀಡುವ ಅಧಿಕಾರ ಹೊಂದಿರುತ್ತಾರೆ.
 • ಸಂಘದ ಒಟ್ಟಾರೆ ಕಾರ್ಯನಿರ್ವಹಣೆಯನ್ನು ಸಂಘದ ಅಧ್ಯಕ್ಷರ ನಿರ್ದೇಶನದ ಮೇರೆ ನಿರ್ವಹಿಸಲು ಸದಸ್ಯ ಕಾರ್ಯದರ್ಶಿಯು ಸಂಘದ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ.

17. ಕಾರ್ಯದರ್ಶಿಯ ಆಡಳಿತಾತ್ಮಕ ಜವಬ್ದಾರಿಗಳು

 • ಸಂಘದ ಆಡಳಿತಾತ್ಮಕ ಕೆಲಸ ಕಾರ್ಯಗಳನ್ನು ಬೈಲಾ ಮತ್ತು ನಿಯಮಗಳಂತೆ ಆಡಳಿತ ಮಂಡಳಿಯ ನಿರ್ದೇಶನ ಮತ್ತು ಅಧ್ಯಕ್ಷರ ಮಾರ್ಗದರ್ಶನದಂತೆ ನಿರ್ವಹಿಸುವುದು.
 • ಯೋಜನೆ ತಯ್ಯಾರಿಕೆ
  • ಪ್ರತಿಯೊಂದು ವರ್ಷದ ಡಿಸೆಂಬರ್-31ನೇ ದಿನಾಂಕಕ್ಕೆ ಮೊದಲು ಅಥವಾ ಸರ್ಕಾರವು ನಿಗದಿ ಪಡಿಸಿದ ಅವಧಿ ಒಳಗಾಗಿ ಸಂಘವು ಆಡಳಿತ ಮಂಡಳಿ ಸಭೆಯಲ್ಲಿ ಅನುಮೊದಿಸಿದ ನಮೂನೆಗಳಲ್ಲಿ ಹಣಕಾಸು ಆಯವ್ಯಯ ಪತ್ರ ಮತ್ತು ವಾರ್ಷಿಕ ಯೋಜನೆಯನ್ನು ಸಿದ್ಧಪಡಿಸಿ ಅನುಮೊದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸತಕ್ಕದ್ದು.
  • ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದ ವಾರ್ಷಿದ ವೆಚ್ಚದ ವಿವರ ಮತ್ತು ಮುಂದಿನ ವರ್ಷದಲ್ಲಿ ಅಗತ್ಯವಿರಬಹುದಾದ ಹುದ್ದೆಗಳು ಮತ್ತು ಸದರಿ ಹುದ್ದೆಗಳ ನಿರ್ವಹಣೆಗೆ ತಗಲಬಹುದಾದ ವೆಚ್ಚಗಳ ವಿವರಗಳನ್ನು ಯೋಜನೆಯಲ್ಲಿ ಅಳವಡಿಸತಕ್ಕದ್ದು.
  • ಸಂಘವು ಮುಂದಿನ ಹಣಕಾಸು ವರ್ಷದಲ್ಲಿ ಭಾಗಶಃ ಅಥವಾ ಪೂರ್ಣವಾಗಿ ಹಣ ಒದಗಿಸಲು ಪ್ರಸ್ತಾಪಿಸಲಾಗಿರುವ ಯೋಜನೆಗಳ ಸಂಪೂರ್ಣ ವಿವರ ಮತ್ತು ತಗಲುವ ಹಣಕಾಸಿನ ವೆಚ್ಚದ ವಿವರಗಳನ್ನು ಯೋಜನೆಯಲ್ಲಿ ಅಳವಡಿಸತಕ್ಕದ್ದು.
  • ರಾಜ್ಯ ಸರ್ಕಾರವು ಅಗತ್ಯಪಡಿಸಬಹುದಾದಂತಹ ಇತರ ವಿವರಣೆಗಳನ್ನು ಯೋಜನೆಯಲ್ಲಿ ಉಲ್ಲೇಖಿಸತಕ್ಕದ್ದು.
 • ಆಯವ್ಯಯಗಳ ತಯ್ಯಾರಿಕೆ
  • ಪ್ರಸಕ್ತ ವರ್ಷದಲ್ಲಿ ಸರ್ಕಾರದಿಂದ ಬಂದ ಅನುದಾನಗಳು, ವಿವಿಧ ಮೂಲಗಳಿಂದ ಬಂದ ದೇಣಿಗೆ ಮತ್ತು ವರಮಾನಗಳ ವಿವರಗಳನ್ನು ಒಳಗೊಂಡಿರುವ ಮತ್ತು ಸಂಘದ ವಿವಿಧ ಯೋಜನೆಗಳಿಗಾಗಿ ವೆಚ್ಚ ಮಾಡಿದ ವಿವರವಾದ ವರದಿಯನ್ನು ಹಾಗೂ ಪ್ರಸಕ್ತ ಸಾಲಿನಲ್ಲಿ ವೆಚ್ಚ ಮಾಡಲು ಬಾಕಿ ಉಳಿದ ಅನುದಾನದ ವಿವರಗಳನ್ನು ಒಳಗೊಂಡಿರುವ ವರದಿಯನ್ನು ತಯ್ಯಾರಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸತಕ್ಕದ್ದು.
  • ಕಾರ್ಯರೂಪದಲ್ಲಿರುವ ಅಥವಾ ಕಾರ್ಯರೂಪಕ್ಕೆ ತರಬೆಕೆಂದು ಉದ್ದೇಶಿಸಿರುವ ಯೋಜನೆಗಲ ಮೇಲಿನ ವೆಚ್ಚಗಳು, ಸಮಿತಿಯ ವೆಚ್ಚಗಳು, ಸಿಬ್ಬಂಧಿವರ್ಗ ಮತ್ತು ಅಧಿಕಾರಿಗಳು ಹಾಗೂ ಇತರೆ ವೇತನ ಭತ್ಯೆಗಳು, ಸಾಧಿಲ್ವಾರು ವೆಚ್ಚ ಮೋಟಾರು ವಾಹನ ಸೇರಿದಂತೆ ಉಪಕರಣಗಳು ಮತ್ತು ಯಂತ್ರಗಳ ವೆಚ್ಚಗಳು ಹಾಗೂ ಕಛೇರಿ ವೆಚ್ಚಗಳ ವಿವರಗಳನ್ನು ಒಳಗೊಂಡಿರತಕ್ಕದ್ದು.
  • ರಾಜ್ಯ ಸರ್ಕಾರವು ಅಗತ್ಯಪಡಿಸಬಹುದಾದಂತಹ ಇತರೆ ವಿವರಣೆಗಳು ಇರತಕ್ಕದ್ದು.
 • ಪೂರಕ ಯೋಜನೆ ಮತ್ತು ಆಯವ್ಯಯ ಪತ್ರ
  • ಸಂಘವು ಸರ್ಕಾರಕ್ಕೆ ಸಲ್ಲಿಸಿದ ವಾರ್ಷಿಕ ಯೋಜನೆಯ ಸಂಬಂಧದಲ್ಲಿ ವರ್ಷದ ಯಾವುದೇ ಕಾಲದಲ್ಲಿ ಪೂರಕ ಯೋಜನೆ ಮತ್ತು ಆಯವ್ಯಯ ಪತ್ರ ಮತ್ತು ಹೆಚ್ಚಿನ ಸಿಬ್ಬಂಧಿವರ್ಗದ ಅವಶ್ಯಕತೆ ಯಾವುದಾದರೂ ಇದ್ದರೆ ಅದನ್ನು ರಾಜ್ಯ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಬಹುದು.
  • ಸಂಘವು ಸಂಬಂಧಪಟ್ಟ ವಿಷಯಗಳ ತಜ್ಞರೊಂದಿಗೆ ಅಥವಾ ಸರ್ಕಾರದ ಇಲಾಖೆಗಳು ಮತ್ತು ಕಾರ್ಯನಿರ್ವಾಹಕ ಏಜನ್ಸಿಗಳೊಂದಿಗೆ ಸಮಾಲೋಚಿಸಿ ಯಾವುದೇ ಕಾಲದಲ್ಲಿ ಸರ್ಕಾರದಿಂದ ಮಂಜೂರಾಗಿರುವ ಯೋಜನೆಯಲ್ಲಿ ಸೇರಿರುವ ಯಾವುದೇ ಪರಿಯೋಜನೆ ಅಥವಾ ಅದರ ಯಾವುದೇ ಭಾಗವನ್ನು ಮಾರ್ಪಾಡು ಮಾಡಬಹುದಾಗಿದೆ.
   ಪರಂತು ಈ ರೀತಿ ಮಾರ್ಪಾಡು ಮಾಡಿದ ಯೋಜನೆಯ ಕಾರ್ಯಾಚರಣೆಗಾಗಿ ಮೂಲತಃ ಮಂಜೂರಾಗಿದ್ದ ಮೊಬಲಗಿನ ಶೇ. 25% ಕ್ಕಿಂತ ಹೆಚ್ಚುವೆಚ್ಚ ಒಳಗೊಂಡಿದ್ದರೆ ಅಥವಾ ಯಾವುದೇ ಅನುಮೋದಿತ ಯೋಜನೆಯ ಮೂಲವ್ಯಾಪ್ತಿ ಮತ್ತು ಉದ್ದೇಶಕ್ಕೆ ಹೊರತಾಗಿದ್ದರೆ ಅಂತಹ ಬದಲಾವಣೆಯನ್ನು ಸರ್ಕಾರದ ಪೂರ್ವ ಮಂಜೂರಾತಿ ಇಲ್ಲದೆ ಮಾಡತಕ್ಕದ್ದಲ್ಲ.
  • ಸಂಘವು ವಾರ್ಷಿಕ ಯೋಜನೆ ಅಥವಾ ಪೂರಕ ಯೋಜನೆಯಲ್ಲಿ ಸೇರಿಸದ ಹೊರತು ಯಾವುದೇ ಯೋಜನೆಯನ್ನು ಕಾರ್ಯರೂಪಕ್ಕೆ ತರತಕ್ಕದ್ದಲ್ಲ.
  • ಸಂಘವು ಯೋಜನೆಯ ಅನುಸಾರವಾಗಿ ತಾನು ಅನುಮೋದಿಸಿದ ಯಾವುದೇ ಪರಿಯೋಜನೆ ಅಥವಾ ಸ್ಕೀಮ್ ಕಾರ್ಯರೂಪಕ್ಕೆ ತರಲು ಸ್ವತಃ ಭಾಗಿಯಾಗುವಂತಿಲ್ಲ. ಎಲ್ಲಾ ಅನುಮೋದಿತ ಯೋಜನೆಗಳನ್ನು ನಿಗದಿತ ಅರ್ಹತೆ ಹೊಂದಿದ ಸಂಘ ಸಂಸ್ಥೆಗಳಿಂದ, ಟ್ರಸ್ಟಗಳಿಂದ, ವಿಶ್ವವಿದ್ಯಾಲಯಗಳು, ಸರ್ಕಾರದ ಸಂಬಂಧಿತ ಇಲಾಖೆಗಳು ಮತ್ತು ಇತರೆ ಖಾಸಗಿ ಸಂಸ್ಥೆಗಳಿಂದ ಕಾರ್ಯರೂಪಕ್ಕೆ ತರಲು ಕ್ರಮವಹಿಸತಕ್ಕದ್ದು.
  • ಸಂಘವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ನಿಗದಿಪಡಿಸಲಾದ ಸಂಸ್ಥೆಗಳು, ಟ್ರಸ್ಟಗಳು ಮತ್ತು ಸರ್ಕಾರದ ಸಂಬಂಧಿತ ಇಲಾಖೆಗಳು ಅವುಗಳಿಗೆ ವಹಿಸಿದ ಜವಾಬ್ದಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದೆ ಇದ್ದಲ್ಲಿ ಸಂಘವು ನಿಯಮಿಸಬಹುದಾದ ಅಂತಹ ನಿಯಮಗಳಿಗೆ ಒಳಪಟ್ಟು ಬೆರೆ ಸಂಸ್ಥೆ, ಟ್ರಸ್ಟ ಮತ್ತು ಸರ್ಕಾರದ ಇತರ ಇಲಾಖೆಗಳಿಗೆ ಯೋಜನೆ ಪೂರ್ಣಗೊಳಿಸುವ ಜವಾಬ್ದಾರಿ ವಹಿಸಲು ಕ್ರಮ ಜರುಗಿಸತಕ್ಕದ್ದು.
  • ಸಂಘವು ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅವಶ್ಯಕವಿರುವ ಮಾಹಿತಿಯನ್ನು ಕಲ್ಯಾಣ ಕರ್ನಾಟಕ ವಿಭಾಗದ ಯಾವುದೆ ಇಲಾಖೆಯ ಅಧಿಕಾರಿಗಳಿಂದ ಮಾಹಿತಿಯನ್ನು ಕೋರಿ ಪಡೆಯಬಹುದು ಮತ್ತು ಸಂಘವು ಕೋರಿದ ಮಾಹಿತಿಯನ್ನು ಒದಗಿಸಲು ಸಂಬಂಧಿತ ಇಲಾಖೆಯ ಅಧಿಕಾರಿಯು ಬದ್ಧರಾಗಿರತಕ್ಕದ್ದು.
 • ಲೆಕ್ಕಪತ್ರಗಳು ಮತ್ತು ಆಯವ್ಯಯ ಪತ್ರದ ಮಂಡನೆ
  • ಕಾರ್ಯದರ್ಶಿಯವರು ಮುಂದೆ ಬರುವ ಏಪ್ರೀಲ್-1 ದಿನಾಂಕದಂದು ಪ್ರಾರಂಭಗೊಳ್ಳುವ ಹಣಕಾಸು ವರ್ಷದ ನಿರಿಕ್ಷಿತ ಸ್ವೀಕೃತಿಗಳು ಮತ್ತು ವೆಚ್ಚಗಳ ಒಂದು ಆಯವ್ಯಯ ಅಂದಾಜಿನೊಂದಿಗೆ ಮುಂದೆ ಬರುವ ಹಣಕಾಸು ವರ್ಷದ ಮಾರ್ಚ-31ನೇ ದಿನಾಂಕದಂದು ಕೊನೆಗೊಳ್ಳುವ ಹಣಕಾಸು ವರ್ಷದ ವಾಸ್ತವಿಕ ಮತ್ತು ನಿರೀಕ್ಷಿತ ಸ್ವೀಕೃತಿಗಳು ಮತ್ತು ವೆಚ್ಚದ ಒಂದು ಪೂರ್ಣ ಲೆಕ್ಕ ಪತ್ರವನ್ನು ತಯ್ಯಾರಿಸಿ ಡಿಸ್ಸೆಂಬರ-1 ರಿಂದ 15ನೇ ದಿನಾಂಕದ ನಡುವೆ ನಡೆಯುವ ಆಡಳಿತ ಮಂಡಳಿಯ ಸಭೆಯಮುಂದೆ ಇಡಲು ಕ್ರಮವಹಿಸತಕ್ಕದ್ದು.
  • ನಂತರ ಸಂಘವು ಮುಂಬರುವ ಹಣಕಾಸು ವರ್ಷದ ಆಯವ್ಯಯದಲ್ಲಿ ಒಳಗೊಂಡಿರುವ ಧನ ವಿನಿಯೋಗಗಳನ್ನು ಮತ್ತು ಮಾರ್ಗೊಪಾಯಗಳನ್ನು ನಿರ್ಧರಿಸಿ ಆಡಳಿತ ಮಂಡಳಿಯ ಸಭೆಯಲ್ಲಿ ಅಂಗಿಕರಿಸಿ ಅನುಮೊದಿಸಿದಂತೆ ಆಯವ್ಯಯವನ್ನು ಸರ್ಕಾರವು ನಿಗದಿಪಡಿಸಿರಬಹುದಾದಂತಹ ದಿನಾಂಕಕ್ಕೆ ಮುಂಚಿತವಾಗಿ ಸರ್ಕಾರಕ್ಕೆ ಕಳುಹಿಸತಕ್ಕದ್ದು.
  • ಸರ್ಕಾರದಿಂದ ನಿಗದಿತ ದಿನಾಂಕದಂದು ಅಥವಾ ಅದಕ್ಕೆ ಮುಂಚೆ ಆಡಳಿತ ಮಂಡಳಿಯು ಆಯವ್ಯಯ ಅಂದಾಜನ್ನು ಅನುಮೋದಿಸಲು ತಪ್ಪಿದರೆ ಕಾರ್ಯದರ್ಶಿಯವರು ಆಯವ್ಯಯ ಅಂದಾಜನ್ನು ಸರ್ಕಾರಕ್ಕೆ ಕಳುಹಿಸತಕ್ಕದ್ದು ಮತ್ತು ಸರ್ಕಾರವು ಅದನ್ನು ಮಾರ್ಪಾಟುಗಳೊಂದಿಗೆ ಅಥವಾ ಮಾರ್ಪಾಟುಗಳಿಲ್ಲದೆ ಅನುಮೋದಿಸತಕ್ಕದ್ದು.
  • ಸರ್ಕಾರದಿಂದ ಹಾಗೆ ಅನುಮೋದಿತವಾದ ಸಂಘದ ಆಯವ್ಯಯವನ್ನು ಸರ್ಕಾರವು ಪ್ರಮಾಣಿಕರಿಸತಕ್ಕದ್ದು ಮತ್ತು ಅನಂತರ ಸಂಘವು ಸದರಿ ಆಯವ್ಯಯವನ್ನು ಯುಕ್ತವಾಗಿ ಅನುಮೋದಿಸಿದೆ ಎಂದು ಭಾವಿಸತಕ್ಕದ್ದು.
 • ಲೆಕ್ಕಪತ್ರಗಳ ನಿರ್ವಹಣೆ ಮತ್ತು ವೆಚ್ಚಗಳು ನಿರ್ಬಂಧಗಳು
  • ವಾರ್ಷಿಕ ಲೆಕ್ಕಗಳು ಸೇರಿದಂತೆ ಸಂಘದ ಆದಾಯ ಮತ್ತು ವೆಚ್ಚಗಳ ಲೆಕ್ಕಪತ್ರಗಳನ್ನು ಸರ್ಕಾರವು ನೀಡುವ ಯಾವುದೇ ನಿರ್ದೇಶನಕ್ಕೆ ಒಳಪಟ್ಟು ಕಾರ್ಯದರ್ಶಿಯವರ ಸಲಹೆಯ ಮೇರೆಗೆ ನಿವೃತ್ತ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧೀಕ್ಷಕ ವೃಂದದ ಸಿಬ್ಬಂಧಿಯ ಮುಖಾಂತರ ಆಡಳಿತ ಮಂಡಳಿಯ ಸಭೆಯು ಅನುಮೋದಿಸಿದ ನಮೂನೆಗಳಲ್ಲಿ ನಿರ್ವಹಿಸತಕ್ಕದ್ದು.
  • ಸಂಘದ ನಿಧಿಯಿಂದ ವೆಚ್ಚವನ್ನು ಈ ನಿಯಮಗಳ ಮೇರೆಗೆ ನೇಮಿಸಲಾದ ಮಂಜೂರಾತಿಗಳು, ಷರತ್ತುಗಳು ಮತ್ತು ಪರಿಮಿತಿಗಳಿಗೆ ಒಳಪಟ್ಟು ನಿರ್ವಹಿಸತಕ್ಕದ್ದು.
  • ಸಂಘವು ಹಣಕಾಸು ವರ್ಷದ ಮುಕ್ತಾಯದ ನಂತರ ನಡೆಯುವ ಮೊದಲನೆ ಸಾಮಾನ್ಯ ಸಭೆಯಲ್ಲಿ ಆ ವರ್ಷದ ಲೆಕ್ಕ ಪತ್ರಗಳನ್ನು ಅಂಗೀಕರಿಸತಕ್ಕದ್ದು. ಆಡಳಿತ ಮಂಡಳಿ ಸಭೆಯಲ್ಲಿ ನಿಗದಿಪಡಿಸಲಾದ ನಮೂನೆಯಲ್ಲಿ ವರದಿಯನ್ನು ತಯ್ಯಾರಿಸಿ ಅಂಗಿಕರಿಸತಕ್ಕದ್ದು.

18. ನಿಯಮಗಳ ರಚನೆ

 • ಆಡಳಿತ ಮಂಡಳಿಯು ನಿಯಮಗಳನ್ನು ರಚನೆ ಮಾಡಲು ಅಧಿಕಾರ ಹೊಂದಿರುತ್ತದೆ
  • ಸಂಘದ ಉದ್ದೇಶದ ಈಡೇರಿಕೆಗಾಗಿ ಹಾಗೂ ದಿನನಿತ್ಯದ ಸುಲಲಿತ ಆಡಳಿತಕ್ಕಾಗಿ ವಿವಿಧ ಉಪಸಮಿತಿ ರಚಿಸುವ ಅಧಿಕಾರ ಹೊಂದಿರುತ್ತದೆ.
  • ಆಡಳಿತ ಮಂಡಳಿಯ ಉದ್ದೇಶದಂತೆ ಕಾಲ ಕಾಲಕ್ಕೆ ಸಭೆಯನ್ನು ನಡೆಸುವ ಅಧಿಕಾರವನ್ನು ಹೊಂದಿರುತ್ತದೆ.
  • ಸಂಘವು ನಿಧಿಗಳನ್ನು ಸ್ವೀಕರಿಸುವ ಮತ್ತು ವೆಚ್ಚ ಭರಿಸುವ ಅಧಿಕಾರ ಹೊಂದಿರುತ್ತದೆ.
  • ಇತರೆ ಉದ್ದೇಶಗಳ ಈಡೇರಿಕೆಗಾಗಿ ನಿಯಮಾವಳಿಗಳನ್ನು ರೂಪಿಸುವ ಅಧಿಕಾರವನ್ನು ಹೊಂದಿರುತ್ತದೆ.
  • ಸಂಘದ ಬೈಲಾದ ಉದ್ದೇಶಗಳನ್ನು ನೆರೆವೇರಿಸಲು ಪೂರಕವಾಗಿ ಆಡಳಿತ ಮಂಡಳಿಯ ರೂಪಿಸಿದ ನಿಯಮಗಳಿಗೆ ಸರಕಾರದ ಅನುಮೋದನೆ ಪಡೆದುಕೊಂಡು ಜಾರಿಗೊಳಿಸಲು ಕ್ರಮ ವಹಿಸುವದು.
 • ಬೈಲಾದ ಉದ್ದೇಶಗಳಿಗೆ ಪೂರಕವಾಗಿ ಆಡಳಿತ ಮಂಡಳಿಯು ರಚಿಸಿರುವ ನಿಯಮಗಳು ಸರಕಾರದ ಅನುಮೋದನೆ ಪಡೆದ ನಂತರ ಅಂತಿಮವಾಗಿರುತ್ತವೆ.
 • ನಿಯಮಗಳಿಗೆ ತಿದ್ದುಪಡಿ ಅವಶ್ಯಕವೆಂದು ಭಾವಿಸಿದಲ್ಲಿ ಆಡಳಿತ ಮಂಡಳಿಯು ಆ ರೀತಿಯ ತಿದ್ದುಪಡಿ ವಿವರಗಳನ್ನು ನಿಯಮಗಳಲ್ಲಿ ಅಳವಡಿಸಿ ಸರಕಾರದಿಂದ ಅನುಮೋದನೆ ಪಡೆದ ನಂತರವೇ ಅನುಷ್ಠಾನಗೊಳಿಸತಕ್ಕದ್ದು.

19. ಸಂಘದ ದಾಖಲಾತಿಗಳ ನಿರ್ವಹಣೆ ಕುರಿತು

ಸಂಘದ ಕಾರ್ಯದರ್ಶಿಯು ಕರ್ನಾಟಕ ಸಂಘ ಸಂಸ್ಥೆಗಳ ನೋಂದಣಿ ಕಾಯ್ದೆ ಮತ್ತು ನಿಯಮಗಳಂತೆ ದಾಖಲೆಗಳನ್ನು ನಿರ್ವಹಿಸುವುದು.

20. ಸಂಘದ ಲೆಕ್ಕ ಪರಿಶೋಧನೆ

ಪ್ರತಿ ವರ್ಷ ಸಂಘದ ಲೆಕ್ಕ ಪರಿಶೋಧನೆಗಾಗಿ, ಭಾರತೀಯ ಚಾರ್ಟೆಡ್ ಅಕೌಂಟೆಂಟ್ ಸದಸ್ಯರನ್ನು ಒಬ್ಬ ಚಾರ್ಟೆಡ್ ಅಕೌಂಟೆಂಟ್ ಅನ್ನಾಗಿ ನೇಮಿಸಿ ಸಂಘದ ಲೆಕ್ಕ ಪರಿಶೋಧನೆಗೊಳಿಸುವುದು.

21. ಬೈಲಾಗಳ ಪ್ರತಿ

ಸಂಘದ ಬೈಲಾ, ನಿಯಮಗಳು, ಹಾಗೂ ಸ್ವೀಕೃತಿ ಮತ್ತು ವೆಚ್ಚಗಳ ತಖ್ತೆಗಳನ್ನು ಎಲ್ಲಾ ಸದಸ್ಯರಿಗೆ ನೀಡುವುದು.

22(A). ನಿಧಿಗಳ ವಿನಿಯೋಜನೆ ಮತ್ತು ಸಂರಕ್ಷಣೆ

ಸಂಘದ ನಿಮಯಾವಳಿಯಂತೆ ಸಂಘದ ಸದಸ್ಯ ಕಾರ್ಯದರ್ಶಿಯು ನಿಧಿಗಳನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇಟ್ಟು ನಿರ್ವಹಿಸುವುದು ಅಥವಾ ಸರ್ಕಾರಿ ಸೆಕ್ಯೂರಿಟಿಗಳಲ್ಲಿ ವಿನಿಯೋಜಿಸುವುದು.

(B). ಬ್ಯಾಂಕಿನ ವ್ಯವಹಾರ ನಿರ್ವಹಿಸುವ ಕುರಿತು

 • ಸಂಘದ ಕಾರ್ಯದರ್ಶಿಗಳು ಸಂಘದ ನಿಧಿಯನ್ನು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇಡುವುದು ಮತ್ತು ನಿರ್ವಹಿಸುವುದು.
 • ಸಂಘದ ಯೋಜನೆಗಳ ಲೆಕ್ಕ ಪತ್ರಗಳನ್ನು ನಿಖರವಾಗಿ ಮಂಡಿಸಲು ಸಾಧ್ಯವಾಗಲು ಯೋಜನೆಗಳಿಗೆ ಅನುಗುಣವಾಗಿ ಮತ್ತು ಸಂಘದ ಬೈಲಾ ಉದ್ದೇಶಗಳಿಗೆ ಒಳಪಟ್ಟು ಅಗತ್ಯವಿರುವ ಸಂಖ್ಯೆಯಲ್ಲಿ ಪ್ರತ್ಯೇಕ ಬ್ಯಾಂಕ ಖಾತೆಗಳನ್ನು ರಾಷ್ಟ್ರೀಕೃತ ಬ್ಯಾಂಕನಲ್ಲಿ ತೆರೆದು ನಿರ್ವಹಿಸಲು ಅಧಿಕಾರ ಹೊಂದಿರುತ್ತಾರೆ.

23. ದಿನ ನಿತ್ಯ ಹಣಕಾಸು ವ್ಯವಹಾರ ನಿರ್ವಹಣೆ ಕುರಿತು

ಆಡಳಿತ ಮಂಡಳಿಯು ರಚಿಸಿರುವ ನಿಯಮಾವಳಿಗಳಂತೆ ಆರ್ಥಿಕ ಮತ್ತು ಆಡಳಿತಾತ್ಮಕ ಅಧಿಕಾರಗಳನ್ನು ಬೈಲಾದಲ್ಲಿ ಇರುವಂತೆ 10(ಸಿ), 16 ಮತ್ತು 30 ರಂತೆ ಪ್ರತ್ಯಾಯೋಜಿಸುವುದು.

24. ಸಂಘದ ವಾರ್ಷಿಕ ಸಾಮಾನ್ಯ ಮತ್ತು ವಿಶೇಷ ಸಭೆಯನ್ನು ಆಯೋಜಿಸುವುದು

 1. ಸಂಘವು ಅಧ್ಯಕ್ಷರ ಆದೇಶದ ಮೇರೆಗೆ ಹಾಗೂ ಸಂಘದ ಸದಸ್ಯರ ಲಿಖಿತ ಮನವಿ ಮೇರೆಗೆ ಆಯೋಜಿಸಬಹುದು. ಸಂಘದ ಆಡಳಿತ ಮಂಡಳಿಯ ಸಾಮಾನ್ಯ ಸಭೆಯನ್ನು ಪ್ರತಿ ವರ್ಷ 30ನೇ ಜೂನ್‍ರ ಒಳಗೆ ಈ ಕೆಳಕಂಡ ಉದ್ದೇಶಗಳನ್ನು ಈಡೇರಿಸಲು ಕರೆಯಬಹುದಾಗಿದೆ.
  • ವರ್ಷದ ವಾರ್ಷಿಕ ವರದಿ ಪಡೆಯಲು ಮತ್ತು ಹಿಂದಿನ ವರ್ಷದ ಲೆಕ್ಕ ಪರಿಶೋಧನಾ ವರದಿಯ ತಖ್ತೆಯನ್ನು ಪರಿಗಣಿಸಲು.
  • ಲೆಕ್ಕಪರಿಶೋಧಕರನ್ನು ನೇಮಕ ಮಾಡಲು.
  • ಬೈಲಾದಲ್ಲಿರುವ ಉದ್ದೇಶ ಮತ್ತು ಚಟುವಟಿಕೆಗಳನ್ನು ಈಡೇರಿಸಲು.
  • ಅಧ್ಯಕ್ಷರ ಅಪ್ಪಣೆ ಮೇರೆಗೆ ಇತರೆ ವಿಷಯಗಳನ್ನು ಚರ್ಚಿಸುವುದು.
  • ಸಂಘದ ಪ್ರತಿಯೊಬ್ಬ ಸದಸ್ಯರು ಅಧ್ಯಕ್ಷರ ಸಹಿತ ಒಂದು ಮತ ಹೊಂದಿರುತ್ತಾರೆ. ಒಂದು ವೇಳೆ ಸಮ ಮತ ಬಂದರೆ ಅಧ್ಯಕ್ಷರಿಗೆ ಒಂದು ಹೆಚ್ಚುವರಿ ಮತ ಚಲಾಯಿಸುವ ಅಧಿಕಾರವಿರುತ್ತದೆ.
 2. ಪ್ರತಿ ವರ್ಷದ ವಾರ್ಷಿಕ ಸಾಮಾನ್ಯ ಸಭೆ ನಡೆಯುವ 14 ದಿನಗಳ ಮುಂಚೆ ಸಂಘದ ಆಡಳಿತ ಮಂಡಳಿಯ ಸದಸ್ಯರ ಹೆಸರು, ವಿಳಾಸ, ವೃತ್ತಿಯ ವಿವರಗಳನ್ನು ನೋಂದಾಣಿಧಿಕಾರಿ ಮುಂದೆ ಹಾಜರುಪಡಿಸುವುದು.

25. ಆಡಳಿತ ಮಂಡಳಿಯ ಸಭೆ

 • ಆಡಳಿತ ಮಂಡಳಿಯ ಸಭೆಯು ಸಾಮಾನ್ಯವಾಗಿ ಎರಡು ತಿಂಗಳಿಗೊಮ್ಮೆ ನಡೆಸುವುದು. ಆದಾಗ್ಯೂ ಅಧ್ಯಕ್ಷರ ನಿರ್ದೇಶಿಸಿದ್ದಲ್ಲಿ, ಅಥವಾ ಕನಿಷ್ಟ ಐದು ಜನ ಸದಸ್ಯರ ಮನವಿ ಸ್ವೀಕರಿಸಿದಲ್ಲಿ ವಿಶೇಷ ಸಭೆಯನ್ನು ಕರೆಯುವುದು.
 • ಕನಿಷ್ಟ ಏಳು ದಿನ ಮುಂಚಿತವಾಗಿ ಸಭಾ ಸೂಚನಾ ಪತ್ರವನ್ನು ಕಳುಹಿಸುವುದು.
 • ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಒಂದನೇ ಮೂರಷ್ಟು (1/3) ಸದಸ್ಯರ ಒಳಗೊಂಡರೆ ಸಂಘದ ಯಾವುದೇ ಸಭೆಯ ಕೋರಂ ಆಗುತ್ತದೆ.
 • ಸಂಘದ ಸದಸ್ಯರಲ್ಲಿ ಭಿನ್ನಾಭಿಪ್ರಾಯವಿದ್ದಲ್ಲಿ, ಬಹುಮತದ ಅಭಿಪ್ರಾಯ ಪರಿಗಣಿಸಲಾಗುವುದು.
 • ಆಡಳಿತ ಮಂಡಳಿಯ ಎಲ್ಲಾ ಸಭೆಯಗಳನ್ನು ಅಧ್ಯಕ್ಷರು, ಅಧ್ಯಕ್ಷತೆ ವಹಿಸುವರು. ಅವರ ಅನುಪಸ್ಥಿತಿಯಲ್ಲಿ ಆಡಳಿತ ಮಂಡಳಿಯ ಯಾವುದಾದರೊಬ್ಬ ಸದಸ್ಯರನ್ನು ಅಧ್ಯಕ್ಷರು ನಾಮನಿರ್ದೇಶನ ಮಾಡಬಹುದು.
 • ಸಂಘದ ಪ್ರತಿಯೊಬ್ಬ ಸದಸ್ಯರು ಅಧ್ಯಕ್ಷರ ಸಹಿತ ಒಂದು ಮತ ಹೊಂದಿರುತ್ತಾರೆ. ಒಂದು ವೇಳೆ ಸಮ ಮತ ಬಂದರೆ ಅಧ್ಯಕ್ಷರಿಗೆ ಒಂದು ಹೆಚ್ಚುವರಿ ಮತ ಚಲಾಯಿಸುವ ಅಧಿಕಾರವಿರುತ್ತದೆ.
 • ಸಂಘದ ನಿರ್ಣಯದ ಪತ್ರಿಯನ್ನು ಎಲ್ಲಾ ಸದಸ್ಯರಿಗೆ ಹಂಚಿಕೆ ಮಾಡಿ ನಿರ್ಣಯ ಕುರಿತು ನಿರ್ಧರಿಸುವಾಗ ಬಹು ಸದಸ್ಯರ ಬಹುಮತ ನಿರ್ಣಯವನ್ನು ಪರಿಗಣಿಸುವುದು.

26. ಬೈಲಾ ತಿದ್ದುಪಡಿ ಮಾಡುವ ಕುರಿತು ವಿಶೇಷ ನಿರ್ಣಯಗಳು

 • ಆಡಳಿತ ಮಂಡಳಿಗೆ ಸಂಘದ ಉದ್ದೇಶ ಮತ್ತು ಚಟುವಟಿಕೆಗಳನ್ನು ಈಡೇರಿಸುವಲ್ಲಿ ಬೈಲಾದಲ್ಲಿ ತಿದ್ದುಪಡಿ ಮಾಡಬೇಕಾದಲ್ಲಿ ಸದರಿ ಪ್ರಸ್ತಾವನೆಯನ್ನು ವಿಶೇಷ ಸಭೆ ಅಥವಾ ಸಾಮಾನ್ಯ ಸಭೆ ಕರೆದು ಸಭೆಯಲ್ಲಿ ಸದರಿ ಪ್ರಸ್ತಾವನೆಯನ್ನು ಮಂಡಿಸಲು ಸಂಘದ ಸದಸ್ಯ ಕಾರ್ಯದರ್ಶಿಗೆ ಸಲ್ಲಿಸುವುದು.
 • ಸದರಿ ಪ್ರಸ್ತಾವನೆಗಳ ಪ್ರತಿಯನ್ನು ಸಂಘದ ಎಲ್ಲಾ ಸದಸ್ಯರುಗಳಿಗೆ ನೋಂದಾಯಿತ ಅಂಚೆ ಮೂಲಕ ಸಭೆಯ ದಿನಾಂಕಕ್ಕಿಂತ 21 ದಿವಸಗಳ ಮುಂಚೆ ಕಳುಹಿಸತಕ್ಕದ್ದು ಮತ್ತು ಸದರಿ ಪ್ರಸ್ತಾವನೆಯ ನಿರ್ಣಯವನ್ನು ಸದರಿ ಸಭೆಯಲ್ಲಿ ಹಾಜರಿರುವ ಸದಸ್ಯರ ಬಹುಮತದ ಆಧಾರದ ಮೇಲೆ ನಿರ್ಣಯವಾಗುತ್ತದೆ.
 • ಸಂಘದ ಯೋಜನೆಗಳ ಅನುಷ್ಠಾನಗೊಳಿಸಲು ಅಗತ್ಯವಿರುವಂತೆ ಬೈಲಾ ಮತ್ತು ನಿಯಮಗಳಿಗೆ ತಿದ್ದುಪಡಿಗಳನ್ನು ಸಂಘದ ಕಾರ್ಯದರ್ಶಿಯವರು ಪ್ರಸ್ತಾವನೆ ಮಾಡಬಹುದಾಗಿದ್ದು ಬೈಲಾ ನಿಯಮ 26 (2)ರ ವಿಧಿವಿಧಾನ ಅನುಸರಿಸಿ ಆಡಳಿತ ಮಂಡಳಿ ಸಭೆ ಕರೆದು ಸಭೆಯ ಬಹುಮತದ ನಿರ್ಣಯದನ್ವಯ ಕ್ರಮ ಜರುಗಿಸುವದು.
 • ಸಂಘದ ಬೈಲಾ ಅಥವಾ ನಿಯಮಗಳಿಗೆ ಅಗತ್ಯ ತಿದ್ದು ಪಡಿಯನ್ನು ಸಂಘದ ಆಡಳಿತ ಮಂಡಳಿಯು ಅನುಮೊದಿಸಿದನ್ವಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿ ಅನುಮೊದನೆಯನ್ನು ಪಡೆದುಕೊಂಡು ಅನುಷ್ಠಾನಗೊಳಿಸುವುದು.

27. ಸಂಘದ ವಹಿಗಳ ನಿರ್ವಹಣೆ

ಸಂಘದ ಸದಸ್ಯರ ವಹಿ, ಸಭೆಯ ನಡವಳಿಗಳ ಪುಸ್ತಕ ಮತ್ತು ಸ್ವೀಕೃತಿ ಮತ್ತು ಖರ್ಚುಗಳ ವಹಿಗಳನ್ನು ಎಲ್ಲಾ ಸದಸ್ಯರ ಅವಗಾಹನೆಗಾಗಿ ಸಂಘದ ಕಚೇರಿ ಕೆಲಸದ ಸಮಯದಲ್ಲಿ ಲಭ್ಯವಿಡಲಾಗುವುದು.

28. ಸಂಘದ ಕೆಲಸ ನಿರ್ವಹಣೆಯ ವರದಿ

 • ಪ್ರತಿ ಹಣಕಾಸು ವರ್ಷ ಮುಗಿದ ನಂತರ ಆರು ತಿಂಗಳ ಒಳಗಾಗಿ ಸಂಘದ ಉದ್ದೇಶ ಮತ್ತು ಚಟುವಟಿಕೆಗಳಂತೆ ನಿರ್ವಹಿಸಲಾಗಿರುವ ಹಿಂದಿನ ವರ್ಷದ ಕಾರ್ಯ ನಿರ್ವಹಣಾ ವರದಿಯನ್ನು ಆಡಿಟ್, ಆದಾಯ ಮತ್ತು ವೆಚ್ಚಗಳ ಜೊತೆಗೆ ಸರ್ಕಾರಕ್ಕೆ ಸಲ್ಲಿಸುವುದು.
 • ಆಡಳಿತ ಮಂಡಳಿಯು ಸಂಘದ ಆಯವ್ಯಯವನ್ನು ಪ್ರತಿ ವರ್ಷ ಸರ್ಕಾರಕ್ಕೆ ಸಲ್ಲಿಸುವುದು.

29. ಸದಸ್ಯರ ಪಟ್ಟಿ

ಸಂಘವು ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಹೆಸರು, ವಿಳಾಸ ಮತ್ತು ವೃತ್ತಿಯ ತಖ್ತೆಯನ್ನು ನಿರ್ವಹಿಸುವುದು. ಒಂದು ವೇಳೆ ಸದಸ್ಯರ ವಿಳಾಸ ಬದಲಾವಣೆ ಕುರಿತು ಸದರಿ ಮಾಹಿತಿಯನ್ನು ಕಾರ್ಯದರ್ಶಿಗೆ ನೀಡುವುದು.

30. ಸದಸ್ಯರ ಪಟ್ಟಿ

ಈ ಕೆಳಕಂಡವರು ಸಂಘದ ಅಧಿಕೃತ ಅಧಿಕಾರಿಗಳಾಗಿರುತ್ತಾರೆ.
 • ಅಧ್ಯಕ್ಷರು
 • ಸದಸ್ಯ ಕಾರ್ಯದರ್ಶಿ
 • ಆಡಳಿತ ಮಂಡಳಿ ಅಥವಾ ಸರ್ಕಾರದಿಂದ ನೇಮಕಗೊಂಡ ಇತರೆ ಅಧಿಕಾರಿಗಳು

31. ಅಧಿಕಾರ ಪ್ರತ್ಯಾಯೋಜನೆ

ಆಡಳಿತ ಮಂಡಳಿಯು ನಿರ್ಣಯಗಳನ್ನು ಹೊರಡಿಸಿ, ಸಂಘದ ಆಡಳಿತದ ಹಿತದೃಷ್ಟಿಯಿಂದ ಅಧಿಕಾರವನ್ನು ಅಧ್ಯಕ್ಷರಿಗೆ ಅಥವಾ ಕಾರ್ಯದರ್ಶಿಗೆ ಅಥವಾ ಸಂಘದ ಇತರೆ ಅಧಿಕಾರಿಗಳಿಗೆ ಅವಶ್ಯ ಕಂಡಲ್ಲಿ, ಪ್ರತ್ಯಾಯೋಜಿಸುವುದು.

32. ಮುಟ್ಟುಗೋಲು ಹಾಕುವ ಅಧಿಕಾರ

ಒಂದು ವೇಳೆ ಸಂಘವು ಬೈಲಾ ದಂತೆ ಉದ್ದೇಶ ಮತ್ತು ಚಟುವಟಿಕೆಗಳನ್ನು ನಿಯಮಾನುಸಾರ ಕಾರ್ಯ ನಿರ್ವಹಿಸದೇ ಇದ್ದಲ್ಲಿ, ಸದರಿ ಸಂಘದ ಅಧಿಕಾರವನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಳ್ಳಬಹುದು.

33. ಹಣಕಾಸು ವರ್ಷ

ಹಣಕಾಸು ವರ್ಷವು ಪ್ರತಿ 1ನೇ ಏಪ್ರಿಲ್ ನಿಂದ ಮುಂಬರುವ 31ನೇ ಮಾರ್ಚ್ ವರೆಗೆ ಇರುತ್ತದೆ.

34. ಸಂಘದ ನಿಧಿ

ಸಂಘವು ನಿಧಿಗಳನ್ನು ಈ ಕೆಳಕಂಡ ಮೂಲಗಳಿಂದ ಹೊಂದಬಹುದಾಗಿರುತ್ತದೆ. (ಚಿ) ಭಾರತ ಸರ್ಕಾರದಿಂದ ಬರುವ ಅನುದಾನ (b) ಕರ್ನಾಟಕ ಸರ್ಕಾರದಿಂದ ಬರುವ ಅನುದಾನ (ಛಿ) ಠೇವಣಿಯಿಂದ ಬರುವ ಅನುದಾನ (ಜ) ಸಂಘ ಸಂಸ್ಥೆ ಸಾರ್ವಜನಿಕರಿಂದ, ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರಿಯ ಸಂಸ್ಥೆಗಳಿಂದ ಸ್ವೀಕರಿಸುವ ದೇಣಿಗೆ. ಇತರೆ ಆದಾಯ ಮೂಲಗಳಿಂದ.

35. ಲೆಕ್ಕ ಪರಿಶೋಧನೆ

ಪ್ರತಿ ವರ್ಷ ಲೆಕ್ಕ ಪರಿಶೋಧನೆಯನ್ನು ಆಡಳಿತ ಮಂಡಳಿಯ ನಿರ್ದೇಶನದ ಮೇಲೆ ನೇಮಕಗೊಂಡಿರುವ ಚಾಟೆರ್Éಡ್ ಅಕೌಂಟೆಂಟ್‍ನಿಂದ ಲೆಕ್ಕ ಪರಿಶೋಧನೆಗೆ ಒಳಪಡಿಸುವುದು ಹಾಗೂ ಲೆಕ್ಕ ಪರಿಶೋಧನೆ ವರದಿಯನ್ನು ಸಂಘದ ಕಾರ್ಯದರ್ಶಿ ಮುಖಾಂತರ ಸಂಬಂಧ ಪಟ್ಟ ಇಲಾಖೆಗೆ ಕಳುಹಿಸಿಕೊಡುವುದು.

36. ಲೆಕ್ಕ ಪರಿಶೋಧನೆ

ವಾರ್ಷಿಕ ವರದಿ:- ಸಂಘದ ವಾರ್ಷಿಕ ಕಾರ್ಯ ನಿರ್ವಹಣಾ ವರದಿಯಲ್ಲಿ ಸಂಘವು ಕೈಗೊಂಡಿರುವ ವಾರ್ಷಿಕ ವರದಿಯ ಜೊತೆಗೆ ವಾರ್ಷಿಕ ಲೆಕ್ಕ ಪರಿಶೋಧನಾ ವರದಿಯನ್ನು ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಂಡಿಸುವುದು.

37. ರಾಜ್ಯ ಸರ್ಕಾರದ ಅಧಿಕಾರ

ಸಂಘದ ಉದ್ದೇಶ ಮತ್ತು ಕಾರ್ಯಚಟುವಟಿಕೆ ನಿರ್ವಹಿಸುವಲ್ಲಿ, ಸರ್ಕಾರವು ಸದರಿ ಸಂಘಕ್ಕೆ ಮಾರ್ಗದರ್ಶನ ನೀಡುವುದು. ನೀತಿ ನಿಯಮಗಳ ಕುರಿತು ಪ್ರಶ್ನೆ ಉದ್ಭವಿಸಿದಲ್ಲಿ ಸರ್ಕಾರವು ಮಾರ್ಗದರ್ಶನ ನೀಡುವುದು. ಸದರಿ ಮಾರ್ಗದರ್ಶನ ಮತ್ತು ನಿರ್ದೇಶನವು ಲಿಖಿತ ರೂಪದಲ್ಲಿರಬೇಕು.

38. ಸಂಘದ ಪರ ಮತ್ತು ವಿರುದ್ಧ ಮೊಕದ್ದಮೆಗಳ ನಿರ್ವಹಣೆ ಕುರಿತು

ಸಂಘಕ್ಕೆ ಆರ್ಥಿಕವಾಗಿ ನಷ್ಟವುಂಟಾದಲ್ಲಿ ಸದರಿ ಆರ್ಥಿಕ ನಷ್ಟಕ್ಕೆ ಕಾರಣರಾದ ಸದಸ್ಯರಾಗಲಿ ಅಥವಾ ಅಧಿಕಾರಿಗಳಾಗಲಿ ಅವರ ವಿರುದ್ಧ ಸಂಘವು ಮೊಕದ್ದಮೆ ಹಾಗೂ ದಾವೆ ಹೂಡುವ ಅಧಿಕಾರವಿರುತ್ತದೆ.

39. ಲಾಭದ ಹಂಚಿಕೆ

ಸಂಘವು ಸ್ವೀಕರಿಸುವ ಯಾವುದೇ ಲಾಭವನ್ನು ಯಾವುದೇ ಕಾರಣಕ್ಕೆ ಆಡಳಿತ ಮಂಡಳಿಯ ಸದಸ್ಯರ ನಡುವೆ ಹಂಚತಕ್ಕದ್ದಲ್ಲ. ಆದರೆ, ಅದನ್ನು ಸಂಘದ ದ್ಯೇಯ ಉದ್ದೇಶಗಳನ್ನು ಈಡೇರಿಸಿಕೊಳ್ಳುವುದಕ್ಕೋಸ್ಕರ ವಿನಿಯೋಗಿಸುವುದು.

40. ವಿಸರ್ಜನೆ

ಸದರಿ ಸಂಘವನ್ನು ವಿಸರ್ಜನೆ ಮಾಡಬೇಕಾಗಿ ಬಂದಲ್ಲಿ, ಸಂಘದಲ್ಲಿರುವ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು, ಸಮಾನ ಉದ್ದೇಶ ಮತ್ತು ಚಟುವಟಿಕೆಗಳನ್ನು ಹೊಂದಿರುವ ಮತ್ತೊಂದು ಸಂಘಕ್ಕೆ ಮಾತ್ರ ಹಂಚಿಕೆ ಮಾಡುವುದು.